

ತೇರದಾಳ: ಸಮೀಪದ ಗೋಲಬಾಂವಿ ಬಸವೇಶ್ವರ ಜಾತ್ರೆ ಸೋಮವಾರ ಅದ್ದೂರಿಯಾಗಿ ನಡೆಯಿತು.
ಬಸವೇಶ್ವರ ಮೂರ್ತಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ರುದ್ರಾಭಿಷೇಕವನ್ನು ಅರ್ಚಕ ಮಾನಿಂಗಯ್ಯ ಮಠದ ನೆರವೇರಿಸಿದರು.
ರಬಕವಿಯ ಗುರುಸಿದ್ಧೇಶ್ವರ ಶ್ರೀಗಳು ನಿತ್ಯ ಸಂಜೆ ಪ್ರವಚನ ನಡೆಯಿತು. ಗ್ರಾಮದ ಹಲವು ಭಜನಾ ತಂಡಗಳು ಭಜನಾ ಗೀತೆಗಳ ಸೇವೆ ನಡೆಸಿಕೊಟ್ಟರು.
ಶ್ರಾವಣ ಮಾಸದ 3ನೇ ಸೋಮವಾರ ಸಂಜೆ ಅಲಂಕೃತಗೊಂಡ ಭವ್ಯ ರಥೋತ್ಸವ ಜರುಗಿತು.
ರಥೋತ್ಸವಕ್ಕೆ ಪೂಜೆ ನೆರವೇರಿಸುವ ಮೂಲಕ ಪೂಜ್ಯರು ಚಾಲನೆ ನೀಡಿದರು. ನಂದಿಕೋಲು ಉತ್ಸವ, ಡೊಳ್ಳಿನ ಕೈಪೆಟ್ಟು, ಶಹನಾಯಿ ವಾದನ, ಸಂಪ್ರದಾನಿ ವಾದನಗಳು ರಥೋತ್ಸವಕ್ಕೆ ಕಳೆಕಟ್ಟಿದವು. ಗೊಂಬೆಗಳ ವೇಷಧಾರಿಗಳು ರಥೋತ್ಸವದ ವಿಶೇಷ ಆಕರ್ಷಣೆಯಾಗಿದ್ದರು.
ಜಾತ್ರಾ ನಿಮಿತ್ತ ವಿವಿಧ ಕ್ರೀಡೆ ಆಯೋಜಿಸಲಾಗಿತ್ತು. ವಿವಿಧ ಮಠಾಧೀಶರು, ಶರಣರು, ಹಲವು ರಾಜಕೀಯ ಧುರೀಣರು, ಗ್ರಾಮ ಸೇರಿ ಸುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.