

ಸೋಮವಾರಪೇಟೆ: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಬ್ಬನಕೊಪ್ಪ ಗ್ರಾಮದ ರಸ್ತೆ ಗುಂಡಿಮಯವಾಗಿದ್ದು, ಸಂಚಾರ ಬಲು ದುಸ್ತರವಾಗಿದೆ. 20 ವರ್ಷಗಳ ಹಿಂದೆ ಡಾಂಬರೀಕರಣವಾಗಿದ್ದ ರಸ್ತೆಯನ್ನು ಈಗ ಗುಂಡಿಗಳ ಮಧ್ಯೆ ಹುಡುಕಬೇಕಾಗಿದ್ದು, ರಸ್ತೆ ದುರಸ್ತಿಗೊಳಿಸಬೇಕೆಂಬ ಗ್ರಾಮಸ್ಥರ ಕೂಗು ಅರಣ್ಯರೋದನವಾಗಿದೆ.
ಕೂಗೇಕೋಡಿಯಿಂದ ಸಬ್ಬನಕೊಪ್ಪ ಗ್ರಾಮಕ್ಕೆ ಸಂಪರ್ಕ ರಸ್ತೆಯಾಗಿದ್ದು, ಗ್ರಾಮ ಪಂಚಾಯಿತಿ ಉದ್ಯೋಗಖಾತ್ರಿ ಯೋಜನೆ ಹಾಗೂ ಶಾಸಕರ ನಿಧಿಯಿಂದ ಕೆಲವು ಕಡೆ ಚಿಕ್ಕಪುಟ್ಟ ಕಾಮಗಾರಿ ನಡೆದಿರುವುದು ಬಿಟ್ಟರೆ, ರಸ್ತೆ ಪೂರ್ಣ ಗುಂಡಿ ಬಿದ್ದಿದೆ. ಏಳೆಂಟು ವರ್ಷಗಳಿಂದ ರಸ್ತೆಗಾಗಿ ಬೇಡಿಕೆಯಿಟ್ಟಿದ್ದರೂ ಕಾಮಗಾರಿಗೆ ಅನುದಾನ ಸಿಕ್ಕಿಲ್ಲ. ರೈತರು ಬೆಳೆದ ಕೃಷಿ ಫಸಲನ್ನು ವಾಹನಗಳಲ್ಲಿ ಸಾಗಿಸಲು ಪರದಾಡಬೇಕಾಗಿದೆ. ಮಳೆಗಾಲದಲ್ಲಂತೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸಬ್ಬನಕೊಪ್ಪ ಗ್ರಾಮದಲ್ಲಿ 10 ಕುಟುಂಬಗಳಿವೆ. ಕಾಫಿ, ಕಾಳುಮೆಣಸು ಪ್ರಮುಖ ಬೆಳೆಯಾಗಿದ್ದು, ಕೊಯ್ಲಿನ ಸಂದರ್ಭ ಲಘು ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಹರಸಾಹಸಪಡಬೇಕು. ಹೊಸಬರು ಈ ರಸ್ತೆಯಲ್ಲಿ ಬೈಕ್‌ಗಳಲ್ಲಿ ತೆರಳಿದರೆ, ಬಿದ್ದು ಗಾಯ ಮಾಡಿಕೊಳ್ಳುವುದು ಮಾಮೂಲಿಯಾಗಿದೆ. ಶಾಲಾ ವಾಹನಗಳು ಗ್ರಾಮದೊಳಗೆ ಬರಲು ಸಾಧ್ಯವಿಲ್ಲದಂತಾಗಿದೆ. ರಸ್ತೆಯಾದರೆ ಮಾತ್ರ ಬಹುತೇಕ ಸಮಸ್ಯೆಗಳಿಂದ ಗ್ರಾಮಸ್ಥರು ಮುಕ್ತಿ ಪಡೆಯಲಿದ್ದಾರೆ. ಸಬ್ಬನಕೊಪ್ಪ ರಸ್ತೆ ತುಂಬಾ ಹಾಳಾಗಿದ್ದು, ನರೇಗಾ ಕ್ರಿಯಾಯೋಜನೆಯಲ್ಲಿ 3 ಲಕ್ಷ ರೂ. ಮೀಡಲಿಡಲಾಗಿದೆ. ಗ್ರಾಮ ಪಂಚಾಯಿತಿಯಿಂದ ದೊಡ್ಡ ಮೊತ್ತದಲ್ಲಿ ರಸ್ತೆ ಮಾಡಲು ಸಾಧ್ಯವಿಲ್ಲ. ಸರ್ಕಾರ ಮಟ್ಟದಲ್ಲಿ ವಿಶೇಷ ಅನುದಾನದ ಅಗತ್ಯವಿದೆ ಎಂದು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಂದು ತಿಳಿಸಿದ್ದಾರೆ.