

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಜಯಶ್ರೀ ಗುತ್ತಲ ದತ್ತಿ ನಿಮಿತ್ತ ಸೆ. 16ರಂದು ಮಧ್ಯಾಹ್ನ 3 ಗಂಟೆಗೆ ಮಹಿಳಾ ಮಂಡಳ ಹಾಗೂ ಮಹಿಳಾ ಭಜನಾ ಮಂಡಳಗಳಿಗೆ ಜಾನಪದ ಸಾಹಿತ್ಯ ಸಂಸ್ಕೃತಿಯ ಮೂಲ ಜಾನಪದ ಸಂಪ್ರದಾಯ ಹಾಡುಗಳ ಸ್ಪರ್ಧೆ ಏರ್ಪಡಿಸಿದೆ. ಸಂಜೆ ಬಹುಮಾನ ಮತ್ತು ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2023 ಪ್ರಶಸ್ತಿ ಪ್ರದಾನ ನಡೆಯಲಿದೆ.
ಸ್ಪರ್ಧೆಯಲ್ಲಿ ಕುಟ್ಟುವ, ಬೀಸುವ ಹಾಗೂ ಸುಗ್ಗಿಯ ಹಾಡುಗಳು, ಕೋಲಾಟ ಪದ, ಗೀಗೀ ಪದ ಹಾಗೂ ಲಾವಣಿ ಪದಗಳು, ಮದುವೆಯ ಸೋಬಾನ ಪದಗಳು, ಎಕ್ಕಯ್ಯ, ಜೋಗಯ್ಯ, ಎಲ್ಲಮ್ಮ ದೇವತೆಗಳ ಪದ, ಜಾನಪದ ಮಂಗಳ ಗೀತೆಗಳನ್ನು ಪ್ರಸ್ತುಪಡಿಸಬಹುದು.
ಪ್ರತಿ ಮಂಡಳಿಗಳಿಂದ ಕನಿಷ್ಠ 5 ಜನ ಮಹಿಳೆಯರು ಭಾಗವಹಿಸಬಹುದು. ಒಂದು ಹಾಡನ್ನು 5 ನಿಮಿಷ ಮಾತ್ರ ಪ್ರಸ್ತುತಪಡಿಸಬೇಕು. ಆಸಕ್ತರು ಸೆ. 10ರೊಳಗೆ ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕು ಎಂದು ಪ್ರಕಟಣೆ ತಿಳಿಸಿದೆ.