

ಬೆಳಗಾವಿ: ಇಂಜಿನಿಯರಿಂಗ್ ಎಂಬುವುದು ಕೇವಲ ಪದವಿಯಲ್ಲ, ಅದು ರಾಷ್ಟ್ರ ನಿರ್ಮಾಣದ ಬುನಾದಿ. ವಿದ್ಯಾರ್ಥಿಗಳೆಲ್ಲರೂ ಸದೃಢ ರಾಷ್ಟ್ರ ನಿರ್ಮಿಸುವತ್ತ ನಡೆಯಬೇಕು. ಯಶಸ್ಸನ್ನು ಸಾಧಿಸಲು ಮೊದಲು ಸರಿಯಾದ ಮಾರ್ಗ ಹುಡುಕಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಡಾ.ಅಲ್ಲಮಪ್ರಭು ಸ್ವಾಮೀಜಿ ಉಪಸ್ಥಿತಿಯಲ್ಲಿ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ರಾಷ್ಟ್ರ ಮಟ್ಟದ ತಾಂತ್ರಿಕ ಉತ್ಸವ ಕಾರ್ಯಕ್ರಮ ‘ಬ್ಲಿಸ್-2025’ ಮಾ.27ರಂದು ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಟೆಕ್ ಫೆಸ್ಟ್ 2025 ಸಂವೀಕ್ಷಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೆಳಗಾವಿ ಆಕ್ಸಿಜನ್ ಪ್ರೈ.ಲಿ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಪಾಟೀಲ ಮಾತನಾಡಿ, ತಂತ್ರಜ್ಞಾನ ದೇಶ ಮುನ್ನಡೆಸುವ ಸಾಧನ. ಅದನ್ನು ಬಳಸಿಕೊಂಡು ಹೆಚ್ಚೆಚ್ಚು ಆವಿಷ್ಕಾರ ಮಾಡಬೇಕು ಎಂದು ಕರೆ ನೀಡಿದರು.
ಡಾ. ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಸಿದ್ಧರಾಮೇಶ್ವರ ಸಂಸ್ಥೆಯು ಸಂಸ್ಥೆ ಮಾತ್ರವಾಗಿರದೆ ವಿದ್ಯಾರ್ಥಿಗಳಿಗೆ ಉಚಿತ ವಸತಿನಿಲಯ ಹಾಗೂ ವೃದ್ಧಾಶ್ರಮಗಳಂತಹ ಸಾಮಾಜಿಕ ಕಳಕಳಿ ಇರುವ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯ ವ್ಯರ್ಥಗೊಳಿಸದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಂಚಾಲಕ ಡಾ. ಕೆ.ಬಿ.ಪ್ರಕಾಶ ಮಾತನಾಡಿದರು. ಎಸ್‌ಜಿಬಿಐಟಿ ಚೇರ್ಮನ್ ಡಾ.ಎಫ್.ವಿ.ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಬಿ.ಆರ್.ಪಟಗುಂದಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಗೌರಿ ಸಾವಳಗಿ ಮತ್ತು ಕುಮಾರ ಕರೋಶಿ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಸಂತೋಷ ಚಿಕ್ಕಬಾಗೇವಾಡಿ, ಪ್ರೊ. ವಿವೇಕಾನಂದ ಕೋರಿಶೆಟ್ಟಿ ವಂದಿಸಿದರು.