ಸನ್ಮಾರ್ಗ ತೋರುವ ಬುದ್ಧ ಸಂದೇಶ : ಜಿಲ್ಲಾಧಿಕಾರಿ ವೆಂಕಟ್​ರಾಜಾ ಹೇಳಿಕೆ

123654
Published on

ಕೋಲಾರ: ಗೌತಮ ಬುದ್ಧನ ಸಂದೇಶ ವಿಶ್ವಶಾಂತಿ ಮತ್ತು ಮನುಕುಲವನ್ನು ಸನ್ಮಾರ್ಗದಲ್ಲಿ ನಡೆಸಲು ಸಹಕಾರಿ ಎಂದು ಜಿಲ್ಲಾಧಿಕಾರಿ ವೆಂಕಟ್​ರಾಜಾ ತಿಳಿಸಿದರು.

ನಗರದ ನಚಿಕೇತ ನಿಲಯದಲ್ಲಿ ಸೋಮವಾರ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ, ಬುದ್ಧ ಧರ್ಮ ಪ್ರಚಾರ ಸಮಿತಿಯಿಂದ ಆಯೋಜಿಸಿದ್ದ 2566ನೇ ಬುದ್ಧಜಯಂತಿಯಲ್ಲಿ ಮಾತನಾಡಿ, ಬುದ್ಧ ರಾಜಮನೆತನದಲ್ಲಿ ಜನಿಸಿದ್ದು, ಅರಮನೆಯಿಂದ ಹೊರಗೆ ಬಂದಾಗ ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆ ಕಂಡು ಮರುಗಿದರು. ಬಡವರು, ಶೋಷಿತರು, ಅಸಹಾಯಕರ ಸ್ಥಿತಿ ನೋಡಿ ರಾಜವೈಭೋಗ ನನಗೇಕೆ ಎಂಬ ನಿರ್ಧಾರಕ್ಕೆ ಬಂದರು. ಜನರಲ್ಲಿನ ಅಸಹನೆ, ಆಸೆ, ಕ್ರೋಧ ಮುಂತಾದವನ್ನು ದೂರಮಾಡಿ ಶಾಂತಿ, ಸಹಬಾಳ್ವೆಯಿಂದ ಬದುಕಲು ಮಾರ್ಗ ತೋರಿದ್ದಾರೆ ಎಂದರು.

ನಮ್ಮ ದೇಶದಲ್ಲಿ ಬುದ್ಧನಂತಹ ಮಹಾತ್ಮ ಜನಿಸಿ ಇಡೀ ವಿಶ್ವಕ್ಕೆ ಪೂಜ್ಯನಿಯರಾಗಿರುವುದು ಹೆಮ್ಮೆಯ ಸಂಗತಿ. ಬುದ್ಧನ ಅನುಯಾಯಿಗಳು ಜಗತ್ತಿನಾದ್ಯಂತ ಇದ್ದು, ಮಾನವನ ಬದುಕು ನೆಮ್ಮದಿಯಾಗಿರಲು ಸಂದೇಶ ಸಾರುತ್ತಿದ್ದಾರೆ. ಬುದ್ಧನ ಸಂದೇಶ ಅನುಸರಿಸಿದರೆ ಶಾಂತಿ, ಸಮಾನತೆ, ಸಹೋದರತ್ವ ಬೆಳೆದು ಅಸೂಯೆ, ಆಸೆ ದೂರವಾಗುತ್ತದೆ ಎಂದರು.

ಜಿಲ್ಲಾ ಅಪರ ಪೋಲಿಸ್​ ವರಿಷ್ಠಾಧಿಕಾರಿ ಸಚಿನ್​ ಘೋರ್ಪಡೆ ಮಾತನಾಡಿ, ಸಮಾಜಕ್ಕೆ ಬುದ್ಧನ ವಿಚಾರಗಳು ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಗುರುವಿಗೆ ಗೌರವ ನೀಡಬೇಕು. ಸಮಾಜಕ್ಕೆ ಶಾಂತಿ ಸಂದೇಶ ಸಾರಬೇಕಾಗಿದೆ ಎಂದರು.

ದಲಿತ ಮುಖಂಡ ಟಿ.ವಿಜಿಕುಮಾರ್​, ನಾರಾಯಣಸ್ವಾಮಿ, ಪಂಡಿತ್​ ಮುನಿವೆಂಕಟಪ್ಪ, ನಾಗನಾಳ ಮುನಿಯಪ್ಪ, ಬೌದ್ಧ್​, ಸುಬ್ಬರಾಯಪ್ಪ, ಮುಖಂಡರಾದ ವೆಂಕಟಾಚಲಪತಿ, ಯುವಶಕ್ತಿ ಸುಬ್ಬು, ಯುವರಾಜ್​, ವಿಜಿಯಮ್ಮ, ಗಾಯಕ ವೆಂಕಟಾಚಲಪತಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net