

ಚಿತ್ರದುರ್ಗ: ಚಳ್ಳಕೆರೆ ರಸ್ತೆಯ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಅ. 17ರಂದು ಬೆಳಗ್ಗೆ 10ಕ್ಕೆ ರಾಜ್ಯ ವಕ್ಫ್ ಮಂಡಳಿಗೆ ನೂತನ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಅನ್ವರ್ ಬಾಷಾ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಇಕ್ಬಾಲ್ ಹುಸೇನ್ (ಎಂಸಿಒ ಬಾಬು) ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಡಳಿಗೆ 4 ದಶಕಗಳ ಹಿಂದೆ ಸೈಯದ್ ಸೈಫುದ್ದೀನ್ ಅಧ್ಯಕ್ಷರಾಗಿದ್ದರು. ಈಗ ಅನ್ವರ್ ಬಾಷಾರನ್ನು ನೇಮಿಸುವ ಮೂಲಕ ರಾಜ್ಯ ಸರ್ಕಾರ ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ನೀಡಿರುವುದು ಸ್ವಾಗತಾರ್ಹ ಎಂದು ಸಂತಸ ವ್ಯಕ್ತಪಡಿಸಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಚಿವರಾದ ಬಿ.ಜಡ್.ಜಮೀರ್ ಅಹಮದ್‌ಖಾನ್, ಡಿ.ಸುಧಾಕರ್, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಎಂಎಲ್ಸಿ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕೆಪಿಸಿಸಿ ಸದಸ್ಯ ಎಸ್.ವಿಜಯಕುಮಾರ್, ಮಹಮ್ಮದ್ ಸಿರಾಜ್ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಅಂದು ಬೆಳಗ್ಗೆ 11ರ ನಂತರ ರಾಜಾವೀರ ಮದಕರಿನಾಯಕ, ಅಂಬೇಡ್ಕರ್, ಸಂಗೊಳ್ಳಿರಾಯಣ್ಣ, ಕನಕದಾಸ, ಒನಕೆ ಓಬವ್ವ ಪ್ರತಿಮೆಗಳಿಗೆ ಸಚಿವರು ಮಾಲಾರ್ಪಣೆ ಮಾಡಲಿದ್ದಾರೆ. ನಂತರ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಸಂಜೆ 4ರ ನಂತರ ಅಲ್ಪಸಂಖ್ಯಾತರ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದರು.
ಸೈಫುಲ್ಲಾ, ಹಾಜಿ ಆರ್.ದಾದಾಪೀರ್, ಸೈಯದ್ ಹನೀಸ್, ಸೈಯದ್ ನಯಾಜ್, ಮುಜಿಬುಲ್ಲಾ, ಸೈಯದ್ ಖುದ್ದೂಸ್,
ರಹಮತ್ ವುಲ್ಲಾ, ಪ್ರಕಾಶ್ ರಾಮನಾಯ್ಕ ಇತರರಿದ್ದರು.