

ರಾಯಚೂರು
ಮಂತ್ರಾಲಯದ ಪವಿತ್ರ ರಾಯರ ಬೃಂದಾವನವಿರುವ ಸ್ಥಳದ ಹತ್ತಿರ ಶ್ರೀರಾಮನ ಭವ್ಯ ಪ್ರತಿಮೆ ಸ್ಥಾಪನೆ ಮಾಡುತ್ತಿರುವುದು ಸನಾತನ ಮತ್ತು ವೈಷ್ಣವ ಪರಂಪರೆ ಬೆಳವಗಣಿಗೆಗೆ ಸಹಕಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಮಂತ್ರಾಲಯದಲ್ಲಿ ಶ್ರೀರಾಮನ 108 ಅಡಿ ಎತ್ತರದ ಪಂಚಲೋಹ ಪ್ರತಿಮೆ ಸ್ಥಾಪನೆಗೆ ಭಾನುವಾರ ಸಂಜೆ ವರ್ಚುವಲ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, 10 ಎಕರೆ ಪ್ರದೇಶದಲ್ಲಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆ ಸ್ಥಾಪನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಪರಂಪರೆಯಿರುವ ತುಂಗಭದ್ರಾ ನದಿ ದಂಡೆಯಲ್ಲಿ ಭವ್ಯ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಪ್ರತಿಮೆ ಸ್ಥಾಪನೆ ಕಾರ್ಯ ಪೂರ್ಣಗೊಳ್ಳಲಿ. ಅಯೋಧ್ಯೆಯಲ್ಲಿಯೂ ಶ್ರೀಘ್ರದಲ್ಲಿ ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಮಾತನಾಡಿ, ದಂಡಕಾರಣ್ಯ ಯಾತ್ರ ಸಂದರ್ಭದಲ್ಲಿ ಶ್ರೀರಾಮನ ಪಾದಸ್ಪರ್ಶ ಇಲ್ಲಿನ ನೆಲಕ್ಕಾಗಿದ್ದು, ರಾಯರ ಮೂಲ ಬೃಂದಾವನವೂ ಇಲ್ಲಿರುವುದರಿಂದ ಮಂತ್ರಾಲಯ ಅತ್ಯಂತ ಪವಿತ್ರ ಸ್ಥಳವಾಗಿದೆ. ಶ್ರೀರಾಮನ ಪಂಚಲೋಹ ಪ್ರತಿಮೆ ಸ್ಥಾಪನೆ ಜತೆಗೆ ಸುತ್ತಮುತ್ತ ಉದ್ಯಾನವನ ಹಾಗೂ ಮಕ್ಕಳಿಗೆ ಆಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಪ್ರತಿಮೆ ಪ್ರತಿಷ್ಠಾಪನೆಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಆಂಧ್ರಪ್ರದೇಶದ ಕಾರ್ಮಿಕ ಖಾತೆ ಸಚಿವ ಪಿ.ಜಯರಾಂ, ಮಾಜಿ ಸಂಸದ ಟಿ.ಜಿ.ವೆಂಕಟೇಶ, ವಿಧಾನ ಪರಿಷತ್ ಎಂ.ವಿಕ್ರರೆಡ್ಡಿ, ಮುಖಂಡರಾದ ಪುರುಷೋತ್ತಮ ರೆಡ್ಡಿ, ಸೀತಾರಾಮರೆಡ್ಡಿ ಹಾಗೂ ಶ್ರೀಮಠದ ಸಿಬ್ಬಂದಿ ಉಪಸ್ಥಿತರಿದ್ದರು.