ಸನಾತನ ಧರ್ಮದಲ್ಲಿದೆ ಜ್ಞಾನರಾಶಿ

30
Published on

ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್​ ರಾಜ್ಯಾಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಅಭಿಪ್ರಾಯ

ತುಮಕೂರು: ವ್ಯಕ್ತಿಗತ ಬೆಳವಣಿಗೆ ಹಾಗೂ ಲೋಕಕಲ್ಯಾಣ ಸನಾತನ ಧರ್ಮದ ತಿರುಳು. ಇಡೀ ಮಾನವ ಜನಾಂಗ ಒಂದೇ ಎಂಬುದನ್ನು

ಅರಿಯುವ ನಿಟ್ಟಿನಲ್ಲಿ ಶಿಕ್ಷಣ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಬೇಕು ಎಂದು ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್​ ರಾಜ್ಯಾಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಅಭಿಪ್ರಾಯಪಟ್ಟರು.

ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಕರ್ನಾಟಕದ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್​ ದಶಮಾನೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ "ವಿವೇಕ ದಶಮಿ: ಭಾವಾವಲೋಕನ' ಕಾರ್ಯಕ್ರಮದಲ್ಲಿ "ಮಾನವೋದ್ಧಾರ ಮತ್ತು ದೇವಾಲಯ ಸಂಸತಿ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆಂತರ್ಯದ ಸತ್ವದ ಹುಡುಕಾಟದ ಪ್ರಕ್ರಿಯೆಯಲ್ಲಿ ಶಿವಜ್ಞಾನೇ ಜೀವ ಸೇವಾ, ಜೀವರಲ್ಲಿ ಶಿವನನ್ನು ಕಂಡು ಪೂಜಿಸಬೇಕು, ಸನಾತನ ಭಾರತೀಯ ಧರ್ಮದಲ್ಲಿರುವ ಜ್ಞಾನರಾಶಿ ಜಗತ್ತಿನ ಇತರ ಧರ್ಮಗಳಲ್ಲಿ ಕಾಣಸಿಗುವುದಿಲ್ಲ ಎಂದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಧರ್ಮರಕ್ಷಣೆ ಕಾರ್ಯದಲ್ಲಿ ದುರ್ಬಲರಿಗೆ ಸೇವೆ ಸಲ್ಲಿಸಲು ಸೇವಾಮಂದಿರಗಳು ಹಾಗೂ ಜ್ಞಾನಪ್ರಸಾರ ಕೇಂದ್ರಗಳನ್ನು ದೇಶದ ಮೂಲೆಮೂಲೆಗಳಲ್ಲಿ ಸ್ಥಾಪಿಸಬೇಕು. ದೇವಾಲಯಗಳು ನಮ್ಮ ಪೂಜಾಕೇಂದ್ರಗಳು ಮಾತ್ರವಾಗಿರದೆ ಸೇವಾವಿಭಾಗ ಹಾಗೂ ಧರ್ಮ ಪ್ರಸಾರ ವಿಭಾಗಗಳನ್ನು ಸ್ಥಾಪಿಸಿ ಜ್ಞಾನಕ್ರಾಂತಿಯಾಗ ಮಾಡಬೇಕು. ನಿತ್ಯಜಿವನದಲ್ಲಿ ಧಮಾರ್ನುಷ್ಠಾನಕ್ಕಾಗಿ ಮನೆಮನೆಗಳು ಮಂದಿರಗಳಾಗಬೇಕು ಎಂದರು.

ಗದಗ- ವಿಜಯಪುರ ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಮಾತನಾಡಿ, ಭಗವದ್ಗೀತೆ ವೇದಗಳಿಗೆ ಉನ್ನತ ಭಾಷ್ಯ. ವೇದಗಳು ಪ್ರವೃತ್ತಿ ಎಂದರೆ ಬಹಿರಂಗದ ಅಭ್ಯುದಯ ಹಾಗೂ ನಿವೃತ್ತಿ ಎಂದರೆ ಅಂತರಂಗದ ಅಭ್ಯುದಯ ಎಂಬ ಎರಡು ಧರ್ಮಗಳನ್ನು ಪ್ರತಿಪಾದಿಸುತ್ತದೆ. ಗೃಹಸ್ಥ ತಪಸ್ವಿಯಂತಿರಬೇಕು, ಸಂನ್ಯಾಸಿ ಸಮಾಜಮುಖಿಯಾಗಿರಬೇಕು. ಇದು ಪ್ರವೃತ್ತಿಯಲ್ಲಿ ನಿವೃತ್ತಿ, ನಿವೃತ್ತಿಯಲ್ಲಿ ಪ್ರವೃತ್ತಿ. ಇದೇ ಸನಾತನ ಧರ್ಮದ ಸಾರ. ನಮ್ಮ ದೇಶ, ಧರ್ಮ ಹಾಗೂ ಕುಲದ ಬಗ್ಗೆ ನಮಗೆ ಹೆಮ್ಮೆಯಿರಬೇಕು. ಈ ಧರ್ಮವನ್ನು ಸ್ವಲ್ಪವೇ ಅನುಸರಿಸಿದರೂ ಮಹಾನ್​ ತೊಂದರೆಗಳಿಂದ ಪಾರಾಗಬಹುದು. ಯಜ್ಞ, ದಾನ, ತಪಸ್ಸು ಎಂದಿಗೂ ಬಿಡಬಾರದು ಎಂದರು.

ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದಜೀ ಮಾತನಾಡಿ, ಗೃಹಸ್ಥಾಶ್ರಮ ಜ್ಯೇಷ್ಠಾಶ್ರಮ, ಭಾರತೀಯ ಚಿಂತನೆ ಇಂದ್ರಿಯಾತೀತ ವಿಜ್ಞಾನ. ಶ್ರೀರಾಮಕೃಷ್ಣರು ಎಲ್ಲ ಧರ್ಮ, ಆಶ್ರಮ ವರ್ಣಗಳವರಿಗೂ ಮಾರ್ಗದರ್ಶಕರಾಗಿದ್ದಾರೆ. ಜಗತ್ತಿನ ಹಿತದೊಂದಿಗೆ ಆತ್ಮೋದ್ಧಾರ ಶ್ರೀರಾಮಕೃಷ್ಣ ಆಂದೋಲನದ ಧ್ಯೇಯೋದ್ದೇಶ ಎಂದರು.

ಬೆಂಗಳೂರಿನ ಶ್ರೀಭವತಾರಿಣಿ ಆಶ್ರಮದ ಅಧ್ಯಕ್ಷ ಮಾತಾಜಿ ವಿವೇಕಮಯೀ ಮಾತನಾಡಿ, ಭಗವಂತನನ್ನು ಮಾತೃಸ್ವರೂಪದಲ್ಲಿ ಪೂಜಿಸುವುದು ಸನಾತನ ಧರ್ಮದ ಶ್ರೇಷ್ಠತೆ. ಶ್ರೀಮಾತೆಯವರ ಪ್ರೇಮ ಭಕ್ತರಿಗೆ ಮಾತ್ರವಲ್ಲ ಪ್ರಾಣಿಪಕ್ಷಿಗಳೆಡೆಗೂ ಹರಿಯುತ್ತಿತ್ತು. ಅವರು ಬಹಳ ತಾಳ್ಮೆಯಿಂದ ಎಲ್ಲರೊಂದಿಗೆ ವ್ಯವಹರಿಸುತ್ತಿದ್ದರು. ಅಮಿತ ಪ್ರೇಮ, ಅಪರಮಿತ ಶಕ್ತಿ, ವೈರಾಗ್ಯ, ಅದಕ್ಕೂ ಮಿಗಿಲಾದ ಪ್ರೀತಿ, ವಾತ್ಸಲ್ಯ, ಯಾರಲ್ಲೂ ದೋಷವನ್ನೇ ಕಾಣದ ಶ್ರೇಷ್ಠ ವ್ಯಕ್ತಿತ್ವ ಶ್ರೀಮಾತೆಯವರದು. ಧರ್ಮವರ್ಣಾತೀತವಾದ ವಾತ್ಸಲ್ಯಧಾರೆ ಅವರದ್ದು ಎಂದರು.

ಬೆಳಗ್ಗೆ ಬೆಂಗಳೂರಿನ ಶಾರದೇಶ್ವರಿ ಆಶ್ರಮದ ಮೀರಾ ಮತ್ತು ಗಾಯತ್ರಿ ಹಾಗೂ ವಿವೇಕಹಂಸ ಬಳಗದವರು ಭಗವನ್ನಾಮ ಸಂಕೀರ್ತನೆ ನೆರವೇರಿಸಿಕೊಟ್ಟರು. ಮುಂಬೈ ರಾಮಕೃಷ್ಣ ಮಿಷನ್​ ಆಸ್ಪತ್ರೆಯ ಚಿಕಿಕ್ಸಾ ಅಧೀಕ್ಷ ಸ್ವಾಮಿ ದಯಾಧಿಪಾನಂದಜೀ "ಆರೋಗ್ಯ ಮತ್ತು ಅಧ್ಯಾತ್ಮ: ಒಂದು ಚಿಂತನೆ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬೀದರ್​ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋರ್ತಿಮಯಾನಂದಜೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net