

ಹಾಸನ: ಸನಾತನ ಧರ್ಮದ ವಿರುದ್ಧ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಖಂಡಿಸಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಾತನ ಧರ್ಮ ಡೇಂಗ್ಯೂ, ಮಲೇರಿಯಾ ಇದ್ದಂತೆ, ಅದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕೆಂದು ತಮಿಳುನಾಡಿನ ಡಿ.ಎಂ.ಕೆ ಪಕ್ಷದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಕರೆ ನೀಡಿರುವುದು ಖಂಡನೀಯ. ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂದು ಧರ್ಮವನ್ನು ವಿರೋಧಿಸುವ ಸ್ಟಾಲಿನ್ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಖಂಡಿಸುವ ಬದಲು, ಎಲ್ಲಾ ರಾಜಕೀಯ ಪಕ್ಷಗಳಿಗೂ ಮಾತನಾಡುವ ಸ್ವಾತಂತ್ರೃವಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಐ.ಎನ್.ಡಿ.ಐ.ಎ ಮೈತ್ರಿಕೂಟ ರಚನೆ ಮಾಡಿಕೊಂಡು ದೇಶದೊಳಗೆ ಕಂದಕ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಎಲ್ಲಾ ಹಿಂದು ವಿರೋಧಿ ರಾಜಕೀಯ ಪಕ್ಷಗಳು ಐಎನ್‌ಡಿಐಎ ಘಟಬಂಧನದ ಪ್ರಮುಖ ಸದಸ್ಯರು. ಈ ಸ್ವಾರ್ಥದ ಮೈತ್ರಿಕೂಟಕ್ಕೆ ಇಂಡಿಯಾ ಎನ್ನುವ ಬದಲು ಹಿಂದು ವಿರೋಧಿ ಮೈತ್ರಿಕೂಟ ಎಂಬ ಹೆಸರು ಅತ್ಯಂತ ಸೂಕ್ತವಾಗಿದೆ. ಕೇವಲ ಚುನಾವಣಾ ಸಮಯದಲ್ಲಿ, ಮಾತ್ರ ಹಿಂದುಗಳಾಗುವ ಕಾಂಗ್ರೆಸ್ ನಾಯಕರು, ನಂತರ ಧರ್ಮವನ್ನು ಅವಹೇಳನ ಮಾಡುತ್ತಲೇ ಬಂದಿದ್ದಾರೆ. ಜೊತೆಗೆ ಅವಹೇಳನ ಮಾಡುವ ವ್ಯಕ್ತಿಗಳಿಗೆ, ಅಂತಹ ಸಂಘಟನೆಗಳಿಗೆ ಕಾಂಗ್ರೆಸ್ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ದೂರಿದರು.
ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಹಿಂದು ವಿರೋಧಿ ಮನಸ್ಥಿತಿ, ಧರ್ಮ ಹಾಗು ದೇವರುಗಳ ಅವಹೇಳನ ಮಾಡುವ ಗುಣವನ್ನು ಕಾಂಗ್ರೆಸ್ ಮತ್ತು ಕೆಲ ಪಕ್ಷಗಳ ನಾಯಕರು ತಮ್ಮ ಕಾಯಕವನ್ನಾಗಿಸಿಕೊಂಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಟಾಲಿನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಗೃಹಸಚಿವ ಪರಮೇಶ್ವರ್ ಉದ್ಧಟತನದ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಅವರ ಹೇಳಿಕೆ ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಘಾಸಿಯುಂಟು ಮಾಡಿದೆ. ಹಿಂದು ಧರ್ಮದ ಬಗ್ಗೆ ಕಾಂಗ್ರೆಸ್ ನಾಯಕರು ಹಗುರವಾಗಿ ಮಾತನಾಡಿ ಧರ್ಮವನ್ನು ಒಡೆಯಲು ಪರೋಕ್ಷವಾಗಿ ಕರೆ ನೀಡುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಮೋಹನ್, ಬಿಜೆಪಿ ನಗರ ಅಧ್ಯಕ್ಷ ವೇಣುಗೋಪಾಲ್, ಮುಖಂಡ ನವಿಲೆ ಅಣ್ಣಪ್ಪ ಸೇರಿ ಮತ್ತಿತರರು ಹಾಜರಿದ್ದರು.