ಸನಾತನ ಧರ್ಮ ರಕ್ಷಣೆಗೆ ಮಠ-ಮಾನ್ಯಗಳು ಒಂದುಗೂಡಬೇಕು: ಅಶೋಕ ಹಾರನಹಳ್ಳಿ ಮನವಿ

10
Published on

ಮೈಸೂರು: ಸನಾತನ ಧರ್ಮ ರಕ್ಷಣೆಗಾಗಿ ಎಲ್ಲ ಮಠ-ಮಾನ್ಯಗಳೂ ಒಂದುಗೂಡಿ ಒಂದೇ ರೀತಿಯ ಸಂದೇಶ ಕೊಡಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಪಂಡಿತರತ್ನ ಕೆ.ಎಸ್.ವರದಾಚಾರ್ಯ ಶತಮಾನೋತ್ಸವ ಸಮಿತಿಯಿಂದ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕೆ.ಎಸ್.ವರದಾಚಾರ್ಯ ಅವರ ಶತಮಾನೋತ್ಸವ ಸಮಾರಂಭದಲ್ಲಿ ಭಾನುವಾರ ಅವರು ಸಮಾರೋಪ ಭಾಷಣ ಮಾಡಿ ಮಾತನಾಡಿದರು.
ಸನಾತನ ಧರ್ಮಕ್ಕೆ ಈಗ ಅಪಾಯ ಉಂಟಾಗುವ ಸ್ಥಿತಿ ಬಂದಿದೆ. ನಮ್ಮ, ನಮ್ಮಲ್ಲಿಯೇ ಅರೋಪ, ಪ್ರತ್ಯಾರೋಪ ಮಾಡಲಾಗುತ್ತಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಎಲ್ಲ ಮಠ, ಮಾನ್ಯಗಳು ಧರ್ಮ ಉಳಿವಿಗಾಗಿ ಒಗ್ಗೂಡಿ ಒಂದೇ ರೀತಿಯ ಸಂದೇಶ ಕೊಡಬೇಕಿದೆ. ಈ ಮೂಲಕ ಸಾಮಾನ್ಯ ಜನರು ಧರ್ಮ, ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪಾಲಿಸುವಂತೆ ಮಾಡಬೇಕು ಎಂದು ಕೋರಿದರು.
ಧಾರ್ಮಿಕ ಕೇಂದ್ರಗಳಾದ ದೇವಸ್ಥಾನಗಳು ಸ್ವಾತಂತ್ರೃವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕಿದೆ. ಸರ್ಕಾರ ರಕ್ಷಣೆಯಿಂದ ದೇವಾಲಯಗಳನ್ನು ಹೊರ ತಂದು, ಸಾಮಾನ್ಯ ಜನರು ಧಾರ್ಮಿಕ ಆಚರಣೆ ಮಾಡಲು ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು. ಮುಂಬರುವ ದಿನಗಳಲ್ಲಿ ಧರ್ಮದ ವಿಚಾರದಲ್ಲಿ ರಾಜ್ಯಾದ್ಯಂತ ಸಂಘಟನೆ ಮಾಡುವ ಕೆಲಸವನ್ನು ಮಹಾಸಭಾದಿಂದ ಹಮ್ಮಿಕೊಳ್ಳಲಾಗುವುದು ಎಂದರು.
ಸಮನ್ವಯ ನಮ್ಮ ಬಾಳಿನ ಸೂತ್ರವಾಗದಿದ್ದರೆ ಕ್ಲಿಷ್ಟ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ಸನಾತನ ಧರ್ಮದ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲಬೇಕಿದೆ. ನಮ್ಮಗಳ ನಡುವೆ ಸಮನ್ವಯ-ಹೊಂದಾಣಿಕೆ ತರಬೇಕಾದದ್ದು ಇಂದಿನ ತುರ್ತು ಅವಶ್ಯವಾಗಿದೆ ಎಂದು ಹೇಳಿದರು.
ಬೇರೆ ಧರ್ಮಗಳಲ್ಲಿ ಸಂಕ್ಷಿಪ್ತವಾಗಿ ಧರ್ಮದ ವಿಚಾರಗಳನ್ನು ತಿಳಿಸಿಕೊಡುವ ಕೆಲಸವಾಗುತ್ತಿದೆ. ಆದರೆ ಸನಾತನ ಧರ್ಮದಲ್ಲಿ ಸಾಕಷ್ಟು ಬೃಹತ್ ಗ್ರಂಥಗಳಿದ್ದು, ಅವುಗಳನ್ನು ಈಗ ಯಾರೂ ಓದಲು ಮನಸ್ಸು ಮಾಡುತ್ತಿಲ್ಲ. ಅವುಗಳನ್ನು ಇಂದಿನ ದಿನಮಾನಕ್ಕೆ, ಆಧುನೀಕತೆಗೆ ತಕ್ಕಂತೆ ಸಂಕ್ಷಿಪ್ತಗೊಳಿಸಿ ನೋಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪಂಡಿತರ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಜನರಲ್ಲಿ ಇಂದು ಧರ್ಮದ ಬಗೆಗೆ ಆಸಕ್ತಿ ಇದ್ದರೂ ಆಚರಣೆಗಳಲ್ಲಿ ನಂಬಿಕೆಯಿಲ್ಲದಂತಾಗಿದೆ. ಯುವ ಜನರ ಈ ಮನೋಭಾವ ಅರಿತ ಇಂದಿನ ಆಧುನಿಕ ಗುರುಗಳು ತಮ್ಮ ಸ್ವಹಿತಾಸಕ್ತಿಗಾಗಿ ಜನರನ್ನು ಬಳಸಿಕೊಳ್ಳುತ್ತಿದ್ದಾರೆ. ಜಾತಿ ಆಧಾರದ ಮೇಲೆ ಅನೇಕ ಸಂಘರ್ಷ ನಡೆಯುತ್ತಿರುವುದರಿಂದ ಧರ್ಮದ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿ ಆಧಾರದ ಮೇಲೆ ಬ್ರಾಹ್ಮಣರಿಗೆ ತೊಂದರೆ ಕೊಡಲಾಗುತ್ತಿದೆ. ಹೀಗಾಗಿ ಎಲ್ಲ ಜಾತೀ-ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಸರ್ಕಾರ ಇದೀಗ ಶೇ.50 ಮೀಸಲಾತಿಯನ್ನು ಘೋಷಿಸಿದೆ. ಇದು ಹೀಗೆಯೇ ಮುಂದುವರೆದು ಎಲ್ಲರಿಗೂ ಶೇ.100 ಮೀಸಲಾತಿ ಕೊಟ್ಟಲ್ಲಿ ಬ್ರಾಹ್ಮಣರು ಮೀಸಲಾತಿಯಿಂದಲೇ ಹೊರಗುಳಿಯಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಜ್ಞಾನ ಸಂಪತ್ತು ಹೊಂದಿದ್ದ ಪಂಡಿತರತ್ನ ವರದಚಾರ್ಯರು, ಕುರಾನ್-ಬೈಬಲ್ ಕೂಡ ಅಭ್ಯಾಸ ಮಾಡಿದ್ದರು. ತಮ್ಮ ಪಾಂಡಿತ್ಯವನ್ನು ಅನೇಕ ಶಿಷ್ಯರಿಗೆ ಧಾರೆ ಎರೆಯುವ ಮೂಲಕ ಜ್ಞಾನ ಪ್ರಸಾರ ಮಾಡಿದ್ದರು ಎಂದು ಬಣ್ಣಿಸಿದರು.
ಪರಮಾತ್ಮನಲ್ಲಿ ನಂಬಿಕೆ. ಆತ್ಮದಲ್ಲಿ ವಿಶ್ವಾಸ ಕಳೆದುಕೊಂಡಿರುವ ಒಂದು ವರ್ಗ, ಅಕ್ಕಿಕಾಳಿನಲ್ಲೂ ಪರಮಾತ್ಮನನ್ನೂ ಕಾಣುವ ಒಂದು ವರ್ಗವಿದೆ. ಈ ರೀತಿಯ ಎರಡು ವರ್ಗಗಳ ಮಧ್ಯೆ ನಾವು ಜೀವಿಸುತ್ತಿದ್ದು, ಸಮನ್ವಯ ಸಾಧಿಸಬೇಕು. ಆಧುನೀಕ ದಿನದಲ್ಲಿ ಯುವ ಪೀಳಿಗೆ ದ್ವಂದ್ವ-ಮಾನಸಿಕ ತುಮುಲದಲ್ಲಿದ್ದು, ಸನಾತನ ಧರ್ಮ ಎಲ್ಲರಿಗೂ ಒಳ್ಳೆಯ ಗುರಿ ತೋರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೊಯಮತ್ತೂರಿನ ವೇದ ವಿದ್ವಾಂಸ ಜಂಬುನಾಥನ್ ಘನಪಾಠಿ ಮತ್ತು ತಮಿಳುನಾಡಿನ ಸಂಸ್ಕೃತ ವಿದ್ವಾಂಸ ಮಣಿ ದ್ರಾವಿಡ ಶಾಸ್ತ್ರೀ ಅವರನ್ನು ಸನ್ಮಾನಿಸಲಾಯಿತು.
ಸೋಂದಾ ಸ್ವರ್ಣವಲ್ಲೀ ಮಠದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಮೇಲುಕೋಟೆ ಯದುಗಿರಿ ಯತಿರಾಜ ಮಠದ ಶ್ರೀಯದುಗಿರಿ ಯತಿರಾಜ ನಾರಾಯಣ, ಗುಜರಾತ್‌ನ ನಾರಾಯಣ ಗುರುಕುಲದ ಶ್ರೀಮಾದವ ಪ್ರಿಯ ದಾಸ್‌ಜೀ ಸಾನ್ನಿಧ್ಯ ವಹಿಸಿದ್ದರು. ಶಾರದಾ ವಿಲಾಸ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಬಿ.ಎಂ.ಸುಬ್ರಾಯ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಶ್ರೀರಂಗಪಟ್ಟಣದ ವಿ.ಭಾನುಪ್ರಕಾಶ್ ಶರ್ಮ, ಮೇಲುಕೋಟೆಯ ಶ್ರೀಇಳೈ ಆಳ್ವಾರ್ ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net