ಸದ್ವಿದ್ಯಾರ್ಥಿಗಳಾಗುವಂತೆ ಸಂಚಾರಿ ಪೊಲೀಸ್ ಉಪ ನಿರೀಕ್ಷಕರ ಸಲಹೆ

12 ckm 2
ಚಿಕ್ಕಮಗಳೂರಿನ ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಆಶ್ರಯದಲ್ಲಿ ಹೊಸ ವರ್ಷ ಶುಭಾರಂಭ ಪ್ರಯುಕ್ತ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಮಾನಸಿಕ ಸಮಾಲೋಚಕಿ ಮಮತಾ ಉದ್ಘಾಟಿಸಿದರು. ಧನಂಜಯ್, ನಳಿನಿ ಡಿ.ಸಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಪಾಲಕರು ಅತ್ಯಂತ ನಿರೀಕ್ಷೆ ಇರಿಸಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವ ನೀಡುತ್ತಿರುವ ಪರಿಸ್ಥಿತಿಯಲ್ಲಿ ವ್ಯಾಸಂಗದ ಕಡೆಗೆ ಹೆಚ್ಚು ಗಮನ ನೀಡುವ ಮೂಲಕ ಉತ್ತಮ ವಿದ್ಯಾರ್ಥಿಗಳಾಗುವಂತೆ ಸಂಚಾರ ಪೊಲೀಸ್ ಠಾಣೆ ಉಪ ನಿರೀಕ್ಷಕ ಧನಂಜಯ ಸಲಹೆ ನೀಡಿದರು.

ನಗರದ ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ನಿಂದ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಶುಭಾರಂಭದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಂಚಾರ ಪೊಲೀಸ್ ಠಾಣೆಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಾನೂನಿಗೆ ವಿರುದ್ಧವಾಗಿ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಮದ್ಯ ಸೇರಿದಂತೆ ಮಾದಕ ದ್ರವ್ಯಗಳ ಸೇವನೆ ಮಾಡಿ ವಾಹನ ಚಲಾಯಿಸುವುದಲ್ಲದೆ, ವ್ಹೀಲಿಂಗ್, ಏಕಮುಖ ಸಂಚಾರಿ ರಸ್ತೆಗಳಲ್ಲಿ ವಾಹನಗಳನ್ನು ಓಡಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಅಲ್ಲದೆ ತಾವು ಕೂಡ ತೊಂದರೆಗೆ ಒಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡುವುದರ ಹೊರತಾಗಿ ಇತರ ಯಾವುದೇ ಜವಾಬ್ದಾರಿಗಳಿರುವುದಿಲ್ಲ. ಓದಿನ ಕಡೆಗೆ ಹೆಚ್ಚಿನ ಗಮನ ನೀಡಿ ತಂದೆ-ತಾಯಿಗೆ ಉತ್ತಮ ಮಕ್ಕಳಾಗಿ, ಗುರುಗಳಿಗೆ ಉತ್ತಮ ಶಿಷ್ಯರಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಳೆದ ಎಂಟು ತಿಂಗಳಲ್ಲಿ ೧೩೦ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ ಪ್ರಕರಣಗಳು ದಾಖಲಾಗಿವೆ. ಆದರೂ ಅದೇ ತಪ್ಪುಗಳು ಮರುಕಳಿಸುತ್ತಿವೆ. ಈ ಕಾಲೇಜು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿ ನೀವು ತಿಳಿದುಕೊಂಡ ವಿಚಾರವನ್ನು ಬೇರೆಯವರಿಗೂ ತಿಳಿಸಿ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾನಸಿಕ ಸಮಾಲೋಚಕಿ ಮಮತಾ ಮಾತನಾಡಿ, ಯುವಜನತೆ ಸಂತೋಷಪಡುವ ಭ್ರಮೆಯಲ್ಲಿ ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿದ್ದಾರೆ. ವಿದ್ಯಾರ್ಥಿಗಳು ವ್ಯಾಸಂಗದ ಹಾದಿ ಬಿಟ್ಟು ಅನ್ಯಮಾರ್ಗವನ್ನು ತುಳಿದಲ್ಲಿ ಮಾನಸಿಕ ಅಸ್ವಸ್ಥತೆಗೆ ಒಳಪಟ್ಟು ಸಮಾಜದಿಂದ ದೂರವಾಗಬೇಕಾಗುತ್ತದೆ. ಕ್ಷಣಿಕ ಸುಖಕ್ಕಾಗಿ ಜೀವನಪರ್ಯಂತ ನೋವು ಅನುಭವಿಸುವುದು ಸಲ್ಲದು. ಅಂತಹ ಮಾನಸಿಕ ಸಮಸ್ಯೆಗಳಿದ್ದಲ್ಲಿ ಸ್ನೇಹಿತರಾಗಲಿ, ಪಾಲಕರಾಗಲಿ ಕೌನ್ಸೆಲಿಂಗ್‌ಗೆ ಕರೆತನ್ನಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ನಳಿನಿ ಡಿ.ಸಾ ಮಾತನಾಡಿ, ವಿದ್ಯಾರ್ಥಿಗಳು ಸಂಭ್ರಮವನ್ನು ಮಾತುಕತೆ, ಹಾಸ್ಯ ಹಾಗೂ ತಮ್ಮಲ್ಲಿ ಸುಪ್ತವಾಗಿರುವ ಕಲೆಯನ್ನು ಪ್ರದರ್ಶಿಸುವ ಮೂಲಕ ವ್ಯಕ್ತಪಡಿಸಬೇಕು. ಮಾದಕ ವಸ್ತು ವ್ಯಸನಿಗಳಾಗದೆ ಕಾನೂನಿನ ಅರಿವು ಮೂಡಿಸಿಕೊಂಡು ಓದು-ಬರಹದತ್ತ ಗಮನ ಹರಿಸುವ ಮೂಲಕ ಉತ್ತಮ ಜೀವನ ನಡೆಸುವಂತೆ ಕಿವಿಮಾತು ಹೇಳಿದರು.

ಶಿಕ್ಷಕಿ ವಜಿಯ, ನಿಸರ್ಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net