ಸದ್ವಿದ್ಯಾದಲ್ಲಿ ಸಂಗೀತ ರಸದೌತಣ

16
Published on

ಮೈಸೂರು: ನಗರದ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ಸಂಜೆ ವೀಣಾವಾದನ ಮತ್ತು ಸಂಗೀತ ರಾಗಲಹರಿ ರಿಂಗಣಿಸಿತು. ಅಲೆ ಅಲೆಯಾಗಿ ಅಪ್ಪಳಿಸಿದ ನಿನಾದಕ್ಕೆ ಸಭಿಕರು ತಲೆದೂಗಿದರು.


ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಶತೋತ್ತರ ಸುವರ್ಣ-ರಜತ ಮಹೋತ್ಸವದ ಅಂಗವಾಗಿ ವಿದುಷಿ ಡಾ.ಜಯಂತಿ ಕುಮರೇಶ್ ಅವರು ಪ್ರಸ್ತುತ ಪಡಿಸಿದ ವೀಣಾವಾದನ ಸಂಗೀತದ ರಸದೌತಣವನ್ನು ಉಣಬಡಿಸಿತು. ಇವರಿಗೆ ವಿದ್ವಾನ್‌ರಾದ ಕುಮರೇಶ್(ವಯೋಲಿನ್), ಅರ್ಜುನ್ ಕುಮಾರ್(ಮೃದಂಗ), ಮತ್ತು ಗುರುಪ್ರಸನ್ನ (ಖಂಜಿರ) ಪಕ್ಕವಾದ್ಯದಲ್ಲಿ ಉತ್ತಮ ಸಾಥ್ ನೀಡಿದರು.


ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸಂಸ್ಥೆಯ ಟಿ.ಪಿ.ಕೈಲಾಸಂ ರಂಗಮಂಟಪದಲ್ಲಿ ಸುದೀರ್ಘ ಎರಡು ಗಂಟೆ ಕಾಲ ನಡೆದ ಸಂಗೀತ ಕಛೇರಿಯನ್ನು ಸಭಿಕರು ಆಸಕ್ತಿಯಿಂದ ಆಸ್ವಾದಿಸಿದರು.


ಸದ್ವಿದ್ಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ವಿ.ಕೆ.ಗೋಪಾಲಾಚಾರ್, ಉಪಾಧ್ಯಕ್ಷ ಸಿ.ಆರ್.ನಾಗರಾಜ್, ಕಾರ್ಯದರ್ಶಿ ಪ್ರೊ.ಎಂ.ಎಸ್.ಕೆ.ನರಹರಿಬಾಬು, ಸದಸ್ಯ ಎಂ.ಡಿ.ಗೋಪಿನಾಥ್, ಕಾಲೇಜು ಪ್ರಾಂಶುಪಾಲ ವೈ.ಆರ್.ರಮೇಶ್, ಪ್ರೌಢಶಾಲೆ ಮುಖ್ಯಶಿಕ್ಷಕ ರಾಮಚಂದ್ರ ಭಟ್, ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಸದ್ವಿದ್ಯಾ ಆಂಗ್ಲೋ ಸಂಸ್ಕೃತ ಪಾಠಶಾಲೆಯ ಶತೋತ್ತರ, ಸದ್ವಿದ್ಯಾ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಹಾಗೂ ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನ ರಜತಮಹೋತ್ಸವವನ್ನು ಸೆ.2ರಿಂದ 4ರ ವರೆಗೆ ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.


ಸೆ.2ರಂದು ಬೆಳಗ್ಗೆ 10ಕ್ಕೆ ಆಯೋಜಿಸಿರುವ ಸಮಾರಂಭದಲ್ಲಿ ‘ಶತೋತ್ತರ, ಸುವರ್ಣ ಹಾಗೂ ರಜತ ಮಹೋತ್ಸವ’ಕ್ಕೆ ವಾಗ್ಮಿ ಡಾ.ವೀಣಾ ಬನ್ನಂಜೆ ಚಾಲನೆ ನೀಡುವರು. ಸೆ.3ರಂದು ಬೆಳಗ್ಗೆ 10ಕ್ಕೆ ‘ಸುರದ್ರುಮ’ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಅತಿಥಿಗಳಾಗಿ ಎನ್.ಆರ್.ಗ್ರೂಪ್ ಅಧ್ಯಕ್ಷ ಆರ್.ಗುರು, ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧು ಬಿ.ರೂಪೇಶ್ ಪಾಲ್ಗೊಳ್ಳಲಿದ್ದಾರೆ.

4ರಂದು ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಗರದ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಪಾಲ್ಗೊಳ್ಳಲಿದ್ದು, ಈ ಸಮಾರಂಭದ ಪೂರ್ವಭಾವಿಯಾಗಿ ಇಂದು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net