ಸದ್ವಿಚಾರಗಳಿಂದ ಉತ್ತಮ ಭವಿಷ್ಯ

bir schooll
ಗಿರಿಯಾಪುರ ಶ್ರೀ ಗುರುಕೃಪಾ ಪ್ರೌಢಾಶಾಲೆಯಲ್ಲಿ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಡಾ. ವಾಮದೇವ, ಎಸ್.ಪಿ.ಯೋಗಣ್ಣ, ಜಿ.ಎಂ.ನೀಲಲೋಚನ ಸ್ವಾಮಿ ಇತರರಿದ್ದರು.
Published on

ಬೀರೂರು: ಪ್ರಕೃತಿಯ ಎಲ್ಲ ಅಂಶಗಳನ್ನೂ ಒಳಗೊಂಡ ಮಾನವ ಪ್ರಕೃತಿಯ ಪ್ರತಿಬಿಂಬವಾಗಿದ್ದಾನೆ ಎಂದು ಮೈಸೂರಿನ ಹೃದ್ರೋಗ ತಜ್ಞ ಡಾ. ಎಸ್.ಪಿ.ಯೋಗಣ್ಣ ಪ್ರತಿಪಾದಿಸಿದರು.

ಗಿರಿಯಾಪುರ ಗ್ರಾಮದ ಗುರುಕೃಪಾ ಪ್ರೌಢಾಶಾಲೆಯಲ್ಲಿ ನಿಜಗುಣ ಒಂದು ನೆನಪು ಕಾರ್ಯಕ್ರಮದಲ್ಲಿ ಶನಿವಾರ ವಿಶೇಷ ಉಪನ್ಯಾಸ ನೀಡಿದರು. ಮಾನವ ಸಂತತಿ ವಿಕಾಸದ ಮೂಲಕ ಬೆಳೆದುಬಂದಿದೆ. ದೇಹ, ಮನಸ್ಸು ಮತ್ತು ಆತ್ಮಗಳ ಸಮ್ಮಿಲನವೇ ಜೀವ. ಮನುಷ್ಯನ ಮೂಲ ಉದ್ದೇಶವೇ ಸಂತಸದಿಂದರಬೇಕು ಎನ್ನುವುದಾಗಿದೆ. ನೀವು ಮಾಡುವ ಕೆಲಸ ನಿಮಗೆ ಸಂತಸ ತಂದರೆ ಅದೇ ನೆಮ್ಮದಿ ಎಂದರು.

ಬದುಕಿನ ವಿಕಾಸ ಮಕ್ಕಳ ವ್ಯಕ್ತಿತ್ವ ರೂಪಿಸಲಿದ್ದು, ಅದಕ್ಕೆ ಭದ್ರವಾದ ಬುನಾದಿಯಾಗಿ ಒಳಿತಿನ ವಿಚಾರಗಳ ಅರಿವು ಮೂಡಿಸಲು ಬೋಧಕರಿಗೆ ಅರಿವು ಇರಬೇಕು. ಜೀವನದ ವಿಕಾಸಕ್ಕೆ ಉತ್ತಮ ಆಹಾರ, ಆರೋಗ್ಯ, ಆಧ್ಯಾತ್ಮ ಮುಖ್ಯ. ಮಿದುಳಿನ ಉತ್ಕೃಷ್ಟ ಕ್ರಿಯೆಯೇ ಜ್ಞಾನದ ತಿಳಿವು ಆಗಿದೆ ಎಂದು ತಿಳಿಸಿದರು.

ಆರೋಗ್ಯದ ಮೂಲ ಸಂತೃಪ್ತಿ. ಅಸೂಯೆ ರೋಗಕಾರಕವಾಗಿದೆ. ನಾವು ನಡೆಸುವ ಸಕಾರಾತ್ಮಕ, ನಕಾರಾತ್ಮಕ ಚಿಂತನೆಗಳು ಮನಸ್ಸಿನ ಭಾವವಾಗಿದ್ದು ಮನಸ್ಸಿನ ರಚನೆಯೇ ಸಂಕೀರ್ಣವಾಗಿದೆ. ಆಧ್ಯಾತ್ಮ್ಮಿಕ ಚಿಂತನೆಯ ಕೃಷಿಯಿಂದ ಒಳಿತಿನ ವಿಚಾರಗಳು, ನಮಗೆ ಸಹಕರಿಸಿದವರ ಬಗ್ಗೆ ಉಪಕೃತ ಭಾವನೆಗಳು ನಮ್ಮನ್ನು ಒಳಿತಿನ ಹಾದಿಯಲ್ಲಿ ನಡೆಸಲಿದ್ದು, ಆತ್ಮ ಮತ್ತು ಮನಸ್ಸಿನ ಸಂಯಮದಿಂದ ದೇಹವನ್ನು ನಿಯಂತ್ರಿಸಿ. ಅದಕ್ಕಾಗಿ ಸಮತೋಲನ ಆಹಾರ ಸೇವಿಸಿ, ಉದಾತ್ತ ಮತ್ತು ಪರರ ಬಗ್ಗೆ ಸಹಾನುಭೂತಿಯ ಭಾವ ಹೊಂದಿ ಉತ್ತಮ ಮನುಷ್ಯರಾಗಿ ಎಂದು ತಿಳಿಸಿದರು.

ತಾಪಂ ಪಿಎಂ ಪೋಷಣ್ ಅಧಿಕಾರಿ ಎನ್.ಎಸ್.ದೇವರಾಜ್ ಮಾತನಾಡಿ, ಅವಿಭಕ್ತ ಕುಟುಂಬ ಪದ್ಧತಿ ಮತ್ತು ಸುಸಂಸ್ಕೃತ ವಾತಾವರಣ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎನ್ನುವುದಕ್ಕೆ ಡಾ. ನಿಜಗುಣ ಉದಾಹರಣೆ. ಹುಟ್ಟಿದ ಊರು ಮತ್ತು ಕಲಿತ ಶಾಲೆಯನ್ನು ಮರೆಯದೆ ಅನುಪಮ ಸೇವೆ ಸಲ್ಲಿಸಿ ಸದ್ಗುಣಿ ಎನಿಸಿಕೊಂಡವರು. ಕನ್ನಡ ಮಾಧ್ಯಮದಲ್ಲಿ ಕಲಿತರೆ ಜೀವನ ಕಷ್ಟ ಎನ್ನುವ ಇಂದಿನ ದಿನಮಾನಗಳಲ್ಲಿ ಮಾತೃಭಾಷೆ ಮೂಲಕ ಕಲಿತು ಬದುಕು ಕಟ್ಟಿಕೊಂಡವರ ಸಂಖ್ಯೆ ಅಧಿಕವಾಗಿದೆ ಎಂದರು.

ಮೈಸೂರಿನ ವಕೀಲ ತಮ್ಮಣ್ಣಗೌಡ ಮಾತನಾಡಿ, ಗಿರಿಯಾಪುರದ ಜನರ ಸಂಸ್ಕಾರ ಮತ್ತು ಸೇವಾ ಮನೋಭಾವ ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಜಾನಪದ ಗಾಯಕ ಅಮ್ಮ ರಾಮಚಂದ್ರ, ಗುರುಕೃಪಾ ಶಾಲೆ ಕಾರ್ಯದರ್ಶಿ ಜಿ.ಎಂ.ನೀಲಲೋಚನ ಸ್ವಾಮಿ, ಡಾ. ಜಿ.ಎಂ.ವಾಮದೇವ, ಜಯಾ ಸೋಮನಾಥ್, ಉಮಾ ಮಹೇಶ್ವರಪ್ಪ, ಧರಣೀಂದ್ರಮೂರ್ತಿ, ಲತಾ ವೀರಪ್ಪ, ಜಿ.ಸಿ.ಶಿವಲಿಂಗಪ್ಪ, ಗುರುಶಾಂತಪ್ಪ, ತೋಂಟದಾರ್ಯ, ಕುಸುಮಾ, ಜಿ.ಎಂ.ಯತೀಶ್, ಕಾಂತರಾಜ್, ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net