

ಮೈಸೂರು: ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಸಿಎಂ ಆಗಿಯೂ ಮುಂದುವರಿಯುತ್ತಾರೆ. ಸಿಎಂ ಕುರ್ಚಿ ವಿಚಾರವಾಗಿ ಕೂಗಾಟ ಚರ್ಚೆ ಏನು ಇಲ್ವಲ್ಲ? ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಕುರ್ಚಿಯ ಬಗ್ಗೆ ಯಾವ ಚರ್ಚೆಗಳೂ ಆಗಿಲ್ಲ. ಅನವಶ್ಯಕವಾಗಿ ಚರ್ಚೆ ಆಗುತ್ತಿದೆಯಷ್ಟೆ ಎಂದು ಹೇಳಿದರು.
ಹೈಕಮಾಂಡ್ ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿದೆ. ಡಿ.ಕೆ.ಶಿವಕುಮಾರ್ ಹೇಳಿರುವುದರಲ್ಲಿ ಸರಿ ಇದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಂದು ಕಡೆ ಸೇರಿ ಊಟ ಮಾಡುವುದು ಅಪರಾಧವೇ? ಟೀ ಕುಡಿಯಲು ಸೇರುವುದು ಗುಂಪುಗಾರಿಕೆಯೇ? ಆ ರೀತಿ ಕಾಂಗ್ರೆಸ್‌ನಲ್ಲಿ ಇಲ್ಲ. ನಮ್ಮಲ್ಲಿ ಎಲ್ಲರೂ ಒಗಟ್ಟಾಗಿದ್ದೇವೆ. ಡಾ.ಜಿ.ಪರಮೇಶ್ವರ್ ಅವರು ಕರೆದಿದ್ದ ಔತಣಕೂಟದ ಸಭೆಗೆ ತಡೆಯಾಗಿಲ್ಲ.
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಜ.13ರಂದು ಬರುತ್ತಿದ್ದಾರೆ. ಚರ್ಚೆ ಮಾಡಿ ಕಾರ್ಯಕ್ರಮ ಮಾಡುತ್ತೇವೆ. ಡಿ.ಕೆ. ಶಿವಕುಮಾರ್ ಇದ್ದಾಗಲೂ ಡಿನ್ನರ್ ನಡೆದಿದೆ, ಇಲ್ಲದಿದ್ದಾಗಲೂ ನಡೆದಿದೆ. ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅರ್ಥ ಇಲ್ಲ ಎಂದು ಹೇಳಿದರು
ಡಿ.ಕೆ.ಶಿವಕುಮಾರ್ ಧಾರ್ಮಿಕವಾಗಿ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಸಂವಿಧಾನದಲ್ಲಿ ಸ್ವಾತಂತ್ರೃ ಇದೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಅಧಿಕಾರಕ್ಕೆ ಬಂದವರಿಗೆ ‘ಅಧಿಕಾರ’ ಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ.
ಜನಗಳಿಗೆ, ದೇಶ ಮತ್ತು ಸಂವಿಧಾನಕ್ಕೆ ಒಳ್ಳೆಯದಾಗಬೇಕೆಂಬ ಆಸೆ ಇದೆ. ನಾನು ಯಾವುದೇ ಹುದ್ದೆಯ ಮೇಲೆ ಆಸೆ ಇಲ್ಲ ಎಂದು ತಿಳಿಸಿದರು.