

ಹಲಗೂರು(ಮಳವಳ್ಳಿ ತಾ.): ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಸಮೀಪದ ತೊರೆಕಾಡನಹಳ್ಳಿ(ಟಿ.ಕೆ.ಹಳ್ಳಿ) ಬಳಿಯ ಬೆಂಗಳೂರು ಜಲಮಂಡಳಿ ಯಂತ್ರಾಗಾರ ಸಂಪೂರ್ಣ ಮುಳುಗಡೆಯಾಗಿದೆ.
ಪರಿಣಾಮ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಹಲವು ದಿನ ಅಥವಾ ವಾರಗಟ್ಟಲೇ ಕಾಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಎದುರಾಗಬಹುದಾದ ಸಮಸ್ಯೆಯ ಗಂಭೀರತೆ ಅರಿತು ಸೋಮವಾರ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
22 ವರ್ಷಗಳ ನಂತರ ಯಂತ್ರಾಗಾರದೊಳಗೆ ನೀರು ನುಗ್ಗಿದೆ. ಆ ವೇಳೆ ಅಷ್ಟೊಂದು ಗಂಭೀರ ಪರಿಣಾಮವಾಗಿರಲಿಲ್ಲ. ಈ ಬಾರಿ ನಿರೀಕ್ಷೆಗೂ ಮೀರಿದ ಅವಾಂತರ ಸೃಷ್ಟಿಯಾಗಿದೆ. ಈಗಾಗಲೇ ಪೂರೈಕೆಯಾಗುತ್ತಿದ್ದ ನೀರಿನ ಪೈಕಿ ಶೇ.65ರಷ್ಟು ಕಡಿತಗೊಂಡಿದೆ. ಬೆಂಗಳೂರಿನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ನೀರನ್ನು ನಗರಕ್ಕೆ ಹಂಚಿಕೆ ಮಾಡಲಾಗಿದೆ. ಆದರೆ ಸೋಮವಾರದಿಂದ ನೀರು ಸಮರ್ಪಕವಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಅಭಾವ ಉಂಟಾಗುವುದರಲ್ಲಿ ಅನುಮಾನವಿಲ್ಲ.
550 ಎಂಎಲ್‌ಡಿ ಪೂರೈಕೆ: ಯಂತ್ರಾಗಾರದಲ್ಲಿರುವ ಮೋಟಾರುಗಳು ನೀರಿನಲ್ಲಿ ಮುಳುಗಿ ಹೋಗಿವೆ. ಇದರಿಂದಾಗಿ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಬೆಂಗಳೂರಿನ ಅರ್ಧದಷ್ಟು ಬಡಾವಣೆಗೆ ನೀರು ಪೂರೈಕೆಯಾಗಿಲ್ಲ. ದಿನದ 24 ಗಂಟೆಯೂ ಯಂತ್ರಾಗಾರ ಕೆಲಸ ಮಾಡುತ್ತದೆ. ಏನಾದರೂ ಕೇವಲ ಒಂದು ಗಂಟೆ ಯಂತ್ರ ಕೆಲಸ ಮಾಡುವುದನ್ನು ನಿಲ್ಲಿಸಿದರೂ ನೀರು ಸರಬರಾಜು ಮಾಡಲು ಕನಿಷ್ಠ ಮೂರು ದಿನ ಬೇಕಾಗುತ್ತದೆ. ಹೀಗಿರುವಾಗ ಪ್ರಸ್ತುತ 18 ಮೋಟಾರುಗಳು ಜಲಾವೃತಗೊಂಡು ಕೆಲಸ ಸ್ಥಗಿತಗೊಳಿಸಿವೆ. ಇದನ್ನು ದುರಸ್ತಿಪಡಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಸೋಮವಾರ ಬೆಂಗಳೂರಿಗೆ 550 ಎಂಎಲ್‌ಡಿಯಷ್ಟೇ ನೀರು ಹೋಗುತ್ತಿದ್ದು, ಸಾಮಾನ್ಯ ದಿನದಲ್ಲಿ 1450 ಎಂಎಲ್‌ಡಿ ನೀರು ಹೋಗಬೇಕಿದೆ. ಯಂತ್ರಗಾರದಲ್ಲಿ 500 ಹಾಗೂ 350 ಎಂಎಲ್‌ಡಿ ನೀರು ಸರಬರಾಜು ಮಾಡುವ ಯಂತ್ರ ಸ್ಥಗಿತಗೊಂಡಿದೆ.
ಯಂತ್ರದಲ್ಲಿ 11 ಅಡಿ ನೀರು: ಯಂತ್ರಾಗಾರದಲ್ಲಿ 23 ಅಡಿ ನೀರು ತುಂಬಿಕೊಂಡಿದೆ. ಸೋಮವಾರ ಬೆಳಗ್ಗೆಯಿಂದ ಸಂಜೆವೆರೆಗೆ ನಡೆದ ಕಾರ್ಯಾಚರಣೆಯಲ್ಲಿ 12 ಅಡಿಯಷ್ಟು ನೀರನ್ನು ಹೊರಗೆ ಹಾಕಲಾಗಿದೆ. ಇನ್ನೂ 11 ಅಡಿ ನೀರು ಇರುವುದರಿಂದ ಅದನ್ನು ಸಂಪೂರ್ಣವಾಗಿ ಹೊರಹಾಕಿ ನಂತರ ಯಂತ್ರಗಳನ್ನು ಡ್ರೈ ಮಾಡಬೇಕು. ಬಳಿಕ ಮತ್ತೆ ಅಳವಡಿಸಿ ಚಾಲನೆ ಮಾಡಬೇಕಿದೆ. ಇಷ್ಟು ಕಾರ್ಯಾಚರಣೆ ಕಡಿಮೆ ಅವಧಿಯಲ್ಲಿ ಮುಗಿಯುವ ಸಾಧ್ಯತೆ ಕಡಿಮೆ. ಆದರೂ ಒತ್ತಡವಿರುವುದರಿಂದ ಸಿಬ್ಬಂದಿ ಹೆಚ್ಚಿನ ಶ್ರಮ ವಹಿಸಬೇಕಿದೆ.
ಸಿಎಂ ಭೇಟಿ, ಯಂತ್ರಾಗಾರ ಪರಿಶೀಲನೆ
75 ವರ್ಷಗಳ ಬಳಿಕ ಇಷ್ಟು ಪ್ರಮಾಣದ ನೀರು
ಯಂತ್ರಾಗಾರಕ್ಕೆ ನೀರು ನುಗ್ಗಿರುವ ಮಾಹಿತಿ ತಿಳಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಿಂದ ಮಳವಳ್ಳಿಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ತೊರೆಕಾಡನಹಳ್ಳಿಗೆ ರಸ್ತೆ ಮೂಲಕ ಬಂದರು. ಬಳಿಕ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ್, ಭೈರತಿ ಬಸವರಾಜ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಯಂತ್ರಾಗಾರ ಪರಿಶೀಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಭಾರಿ ಮಳೆಗೆ ಭೀಮಾ ನದಿ ಉಕ್ಕಿ ಹರಿದಿದೆ. ನದಿ ನೀರು ಹೆಚ್ಚಾಗಿ ನೀರು ಸರಬರಾಜು ಘಟಕಕ್ಕೂ ನುಗ್ಗಿದೆ. ಇದರಿಂದ ಬಹಳಷ್ಟು ಹಾನಿಯಾಗಿದೆ. 75 ವರ್ಷಗಳ ಬಳಿಕ ಈ ನದಿಯಲ್ಲಿ ಇಷ್ಟು ಪ್ರಮಾಣದ ನೀರು ಬಂದಿದೆ. 5 ಘಟಕಗಳ ಪೈಕಿ 2 ಪಂಪ್‌ಹೌಸ್‌ಗಳಿಗೆ ನೀರು ನುಗ್ಗಿದೆ. 1,450 ಎಂಎಲ್‌ಡಿ ಸಾಮರ್ಥ್ಯದ ಪಂಪ್ ಹೌಸ್‌ಗಳಿವೆ. 550 ಮತ್ತು 350 ಎಂಎಲ್‌ಡಿ ಸಾಮರ್ಥ್ಯದ ಘಟಕಕ್ಕೆ ನೀರು ನುಗ್ಗಿದೆ. 550 ಎಂಎಲ್‌ಸಿ ಸಾಮರ್ಥ್ಯದ ಪಂಪ್‌ಹೌಸ್‌ಗಳು ಈಗಾಗಲೇ ಕೆಲಸ ಮಾಡುತ್ತಿವೆ. ಇದರ ಮೂಲಕ ನೀರು ಬೆಂಗಳೂರಿಗೆ ನಿರಂತರವಾಗಿ ಸರಬರಾಜು ಆಗುತ್ತಿದೆ ಎಂದರು.
ನೀರು ತುಂಬಿದ ಎರಡು ಪಂಪ್‌ಹೌಸಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಸ್ಟೇಜ್ 4 ಪಂಪ್‌ಹೌಸ್‌ನಲ್ಲಿ 12 ಅಡಿ ನೀರು ಹೊರಗೆ ತೆಗೆಯಲಾಗಿದೆ. ಇನ್ನೂ 11 ಅಡಿ ನೀರು ತೆಗೆಯಬೇಕು. ಸೋಮವಾರ ಮಧ್ಯರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ಒಳಗೆ ಈ ಕಾರ್ಯ ಮುಗಿಯಲಿದೆ. ಯಂತ್ರೋಪಕರಣಗಳನ್ನು ಡ್ರೈ ಮಾಡಿ, ಎಲ್ಲವನ್ನೂ ಪರಿಶೀಲಿಸಲಾಗುವುದು. ಬಳಿಕ 350 ಎಂಎಲ್‌ಡಿ ನೀರನ್ನು ಸರಬರಾಜು ಮಾಡಲಾಗುತ್ತದೆ. ಇದರಿಂದ ಮತ್ತಷ್ಟು ನೀರನ್ನು ಬೆಂಗಳೂರಿಗೆ ಒದಗಿಸಲು ಸಾಧ್ಯವಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಪಂಪ್‌ಹೌಸ್ ಸುತ್ತ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗುವುದು ಎಂದರು.
ನವೆಂಬರ್, ಜನವರಿಯಿಂದ ಪ್ರಾರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದೆ. ರಾಜ್ಯದ ಎಲ್ಲ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಮಳೆ ನೀರು, ಕೆರೆ ನೀರು ಒಟ್ಟಾಗಿ ಹರಿದು ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆ ಜಾಗ್ರತೆ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬೆಂಗಳೂರಿಗೆ ನೀರಿನ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು. ಸದ್ಯಕ್ಕೆ ಬೋರ್‌ವೆಲ್‌ಗಳಲ್ಲಿ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. 8 ಸಾವಿರ ಬೋರ್‌ವೆಲ್ ಬಿಡಬ್ಲುೃಎಸ್‌ಎಸ್ ವ್ಯಾಪ್ತಿಗೆ ಬರಲಿದೆ. 3 ಸಾವಿರಕ್ಕೂ ಹೆಚ್ಚು ಬೋರ್‌ವೆಲ್ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಅವೆಲ್ಲವನ್ನೂ ಸರಿಪಡಿಸಿ ನೀರು ಸರಬರಾಜು ವ್ಯವಸ್ಥೆ ಮಾಡುತ್ತೇವೆ. ಬೋರ್‌ವೆಲ್ ಇಲ್ಲದ ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಒತ್ತುವರಿ ತೆರವು ಆರಂಭಿಸಲಾಗಿದೆ. ದೊಡ್ಡ ಟ್ಯಾಂಕ್ ಕಾಲುವೆಗಳು ಒತ್ತುವರಿಯಾಗಿದೆ. ದೊಡ್ಡ ಮಳೆಯಾಗದ ಕಾರಣ ಇಷ್ಟು ವರ್ಷ ಗೊತ್ತಾಗಿರಲಿಲ್ಲ. ಇದೇ ಭೀಮಾ ನದಿಯಲ್ಲಿ ಒತ್ತುವರಿಯಾಗಿದೆ. ಆ ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸಲಾಗಿದೆ. ಬಹಳಷ್ಟು ಕಡೆ ಕೆರೆ, ಹಳ್ಳ ಒತ್ತುವರಿಯಾಗಿ ಪ್ರವಾಹ ಆಗುತ್ತಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ಕ್ರಮಗಳನ್ನು ಎಲ್ಲ ರೀತಿಯಲ್ಲೂ ಜರುಗಿಸುತ್ತೇವೆ. ಈಗ ಪಂಪ್‌ಹೌಸ್ ಸಮಸ್ಯೆ ಬಗೆಹರಿಸಿ ಬೆಂಗಳೂರಿಗೆ ನೀರು ಕೊಡುವುದು ನಮ್ಮ ಮುಂದೆ ಇದೆ ಎಂದರು.
ಹಳ್ಳಕ್ಕೆ ಇಳಿದ ಆಂಬುಲೆನ್ಸ್
ಸಿಎಂ ಕಾರನ್ನು ಹಿಂಬಲಿಸುವ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿಯಿತು. ಮಳವಳ್ಳಿ ಹೆಲಿಪ್ಯಾಡ್‌ನಿಂದ ಟಿ.ಕೆ.ಹಳ್ಳಿಗೆ ಹೋಗುವ ವೇಳೆ ನಿಯಂತ್ರಣ ತಪ್ಪಿ ಹಳ್ಳಕೆ ಇಳಿಯಿತು. ಈ ವೇಳೆ ಯಾವುದೇ ಅಪಾಯ ಸಂಭವಿಸಿಲ್ಲ. ಅಗ್ನಿಶಾಮಕ ದಳದ ವಾಹನದ ಸಹಾಯದಿಂದ ಆಂಬುಲೆನ್ಸ್ ಅನ್ನು ಮೇಲೆ ಎಳೆಯಲಾಯಿತು.