ಸದ್ಯಕ್ಕೆ ಪ್ರವಾಹ ಪರಿಸ್ಥಿತಿ ಇಲ್ಲ - ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

01
Published on

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ ವಿನಾ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಉದ್ಬವಿಸಿಲ್ಲ. ಆದರೂ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಘಟಪ್ರಭಾ, ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಪಾತ್ರದ ವಿವಿಧ ಪ್ರದೇಶಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹ ಎದುರಿಸಲು ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ 26 ಬೋಟ್ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಅಗತ್ಯಬಿದ್ದರೆ ಹೆಚ್ಚುವರಿ ಬೋಟ್‌ಗಳನ್ನು ಕಾರವಾರದಿಂದ ತರಿಸಲಾಗುವುದು ಎಂದರು.

ಕಳೆದ ಬಾರಿ ಪ್ರವಾಹ ಬಂದಾಗ ಉಂಟಾಗಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಮಾಡಿಕೊಳ್ಳಲಾಗಿದ್ದು, ಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಕೆಳಹಂತದಲ್ಲಿರುವ ಸೇತುವೆಗಳು ಮುಳುಗಡೆಯಾದಾಗ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜನರು ದಾಟದಂತೆ ಬ್ಯಾರಿಕೇಡ್ ಹಾಕಲಾಗುತ್ತಿದೆ. ನದಿ ದಡದ ಪ್ರದೇಶದಲ್ಲಿನ ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ನೆರೆಯ ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಅದೇ ರೀತಿ ಜಿಲ್ಲೆಯಲ್ಲಿಯೂ ಹಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಎಚ್ಚರಿಕೆ ವಹಿಸಬೇಕು. ನದಿಯ ಒಳಹರಿವಿನ ಮೇಲೆ ನಿರಂತರ ನಿಗಾ ಇಡಲಾಗುವುದು ಎಂದು ತಿಳಿಸಿದರು.

ಹುಕ್ಕೇರಿ ತಹಸೀಲ್ದಾರ್ ಮಂಜುಳಾ ನಾಯಕ ಮಾತನಾಡಿ, 2019ರ ಪ್ರವಾಹ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದ ಕಾಳಜಿ ಕೇಂದ್ರಗಳಂತೆ ಈ ಬಾರಿಯೂ ಈಗಾಗಲೇ ಕಾಳಜಿ ಕೇಂದ್ರಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ, ಯಡೂರ ಗ್ರಾಮದ ಬಳಿ ಬೋಟ್ ಮೂಲಕ ಕೃಷ್ಣಾ ನದಿಯಲ್ಲಿ ಸಂಚರಿಸಿದರು. ತುರ್ತು ಸಂದರ್ಭದಲ್ಲಿ ಜನ ಮತ್ತು ಜಾನುವಾರು ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ, ತಹಸೀಲ್ದಾರ್ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net