

ಗದಗ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಮೂವರು ಕರೊನಾ ವೈರಸ್ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಶನಿವಾರ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯು ಕರೊನಾ ಮುಕ್ತ ಜಿಲ್ಲೆ ಎನಿಸಿದೆ. 42 ವರ್ಷದ ವ್ಯಕ್ತಿ (ಪಿ 370), 24 ವರ್ಷದ ಯುವಕ (ಪಿ 396) ಹಾಗೂ 75 ವರ್ಷದ ವೃದ್ಧ (ಪಿ 514) ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು.
ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರೆಡ್ಡಿ, ವೈದ್ಯರು, ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಜಿಲ್ಲಾಸ್ಪತ್ರೆಯಿಂದ ಮೂವರನ್ನು ಬಿಡುಗಡೆಗೊಳಿಸಿ ಬೀಳ್ಕೊಟ್ಟರು. ಜಿಲ್ಲಾಡಳಿತದ ವತಿಯಿಂದ ಮೂವರಿಗೂ ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ನೀಡಿ ಆಂಬುಲೆನ್ಸ್ ಮೂಲಕ ಅವರನ್ನು ಮನೆಗೆ ಕಳುಹಿಸಿಕೊಡಲಾಯಿತು.
ನಗರದ ರಂಗನವಾಡಿ ಗಲ್ಲಿಯಲ್ಲಿ ನಾಲ್ಕು ಮತ್ತು ಗಂಜಿ ಬಸವೇಶ್ವರ ಓಣಿಯಲ್ಲಿ ಒಂದು ಸೇರಿ ಒಟ್ಟು ಜಿಲ್ಲೆಯಲ್ಲಿ ಐದು ಕರೊನಾ ಸೋಂಕಿತರಿದ್ದರು. ಇದರಲ್ಲಿ ಮೊದಲ ಕೇಸ್ 80 ವರ್ಷದ ಸೋಂಕಿತ ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಉಳಿದ ನಾಲ್ಕು ಕೇಸ್ಗಳ ಪೈಕಿ 59 ವರ್ಷದ ಮಹಿಳೆ ವಾರದ ಹಿಂದೆ ಬಿಡುಗಡೆಯಾಗಿದ್ದರು.
ವೈದ್ಯರಿಗೆ ಅಭಿನಂದನೆ
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತ ಎಲ್ಲ 3 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ವೈದ್ಯರಿಗೆ, ಆರೋಗ್ಯ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ಹಾಟ್ಸ್ಪಾಟ್ ಆಗಿದ್ದ ರಂಗನವಾಡಿ ಗಲ್ಲಿ!
ಗದಗ ಜಿಲ್ಲೆಯಲ್ಲಿ ಪತ್ತೆಯಾದ ಐದು ಕರೊನಾ ವೈರಸ್ ಸೋಂಕಿತ ಪ್ರಕರಣಗಳು ನಗರದಲ್ಲಿ ಪತ್ತೆಯಾಗಿದ್ದರಿಂದ ಗದಗ-ಬೆಟಗೇರಿ ಅವಳಿನಗರದ ಜನರು ಅಕ್ಷರಶಃ ಭೀತಿಗೆ ಒಳಗಾಗಿದ್ದರು. ನಗರದ ರಂಗನವಾಡಿ ಪ್ರದೇಶದಲ್ಲೇ ಮೊದಲ ನಾಲ್ಕು ಕೇಸ್ಗಳು ಪತ್ತೆಯಾಗಿದ್ದವು. ಹೀಗಾಗಿ ರಂಗನವಾಡಿಗಲ್ಲಿ ಕರೊನಾ ಹಾಟ್ಸ್ಪಾಟ್ ಆಗಿತ್ತು. ಕರೊನಾ ವೈರಸ್ ನಿಯಂತ್ರಣಕ್ಕಾಗಿ ರಂಗನವಾಡಿ ಗಲ್ಲಿಯನ್ನು ಜಿಲ್ಲಾಡಳಿತ ಕಂಟೇನ್ಮೆಂಟ್ ವಲಯ ಎಂದು ಘೊಷಿಸಿ ಬಿಗಿ ಬಂದೋಬಸ್ತ್ ಮಾಡಿ ಕರೊನಾ ಹರಡುವಿಕೆ ನಿಯಂತ್ರಣಕ್ಕೆ ಮುಂದಾಗಿತ್ತು. ನಗರದ ಗಂಜಿ ಬಸವೇಶ್ವರ ಓಣಿಯಲ್ಲಿ ಪತ್ತೆಯಾದ ಐದನೇ ಕೇಸ್ ಕೂಡ ಗುಣಮುಖವಾಗಿದ್ದರಿಂದ ಅವಳಿನಗರದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಗುಣಮುಖರಾದ ಮೂವರು ಮುಂದಿನ 14 ದಿನಗಳ ಕಾಲ ತಮ್ಮ ತಮ್ಮ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲಿದ್ದು, ಅವರ ಆರೋಗ್ಯ ಕುರಿತು ಆರೋಗ್ಯ ಕಾರ್ಯಕರ್ತರು ನಿರಂತರ ನಿಗಾ ವಹಿಸುವರು.ಡಾ. ಪಿ.ಎಸ್. ಭೂಸರೆಡ್ಡಿ, ಜಿಮ್್ಸ ನಿರ್ದೇಶಕ
ಗದಗ ಜಿಲ್ಲೆಯಲ್ಲಿ ಪತ್ತೆಯಾದ ಐವರು ಕರೊನಾ ಸೋಂಕಿತರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದರಿಂದ ಸದ್ಯಕ್ಕೆ ಗದಗ ಜಿಲ್ಲೆ ಕರೊನಾ ಸೋಂಕಿನಿಂದ ಮುಕ್ತವಾಗಿದೆ. |ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ