ಸದ್ಯಕ್ಕೆ ಗ್ರಾಮಾಂತರ ಜಿಲ್ಲೆ ಸುರಕ್ಷಿತ, ಶೂನ್ಯದತ್ತ ಕರೊನಾ ಸೋಂಕಿತರ ಪ್ರಕರಣ, ವಿಮಾನ ನಿಲ್ದಾಣದತ್ತ ಜಿಲ್ಲಾಡಳಿತ ನಿಗಾ

3
Published on

ಬೆಂಗಳೂರು ಗ್ರಾಮಾಂತರ: ಕರೊನಾ ನಾಲ್ಕನೇ ಅಲೆ ಆತಂಕದ ನಡುವೆಯೂ ಕರೊನಾ ಪ್ರಕರಣಗಳ ಅಂಕಿಸಂಖ್ಯೆಯಲ್ಲಿ ಯಾವುದೇ ಏರಿಕೆ ಇಲ್ಲದೆ ಗ್ರಾಮಾಂತರ ಜಿಲ್ಲೆ ಸದ್ಯಕ್ಕೆ ಸ್ೇ ಆಗಿದೆ. ಶೂನ್ಯದತ್ತ ಕರೊನಾ ಪ್ರಕರಣ ಇಳಿಕೆ ಕಂಡಿದ್ದು, ತಿಂಗಳಲ್ಲಿ ಕೇವಲ 14 ಕೇಸ್ ಪತ್ತೆಯಾಗಿವೆ.

ಇದುವರೆಗೆ ಕರೊನಾಗೆ ಜಿಲ್ಲೆಯ 907 ಮಂದಿ ಬಲಿಯಾಗಿದ್ದಾರೆ. ಮೂರೂ ಅಲೆಯಿಂದ ಇದುವರೆಗೆ 79,286 ಸೋಂಕಿತ ಪ್ರಕರಣಗಳು ದಾಖಲಾಗಿದ್ದವು. ಸದ್ಯ 7 ಸಕ್ರಿಯ ಪ್ರಕರಣಗಳಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಕರೊನಾ ಮೂರು ಅಲೆಯ ಬಳಿಕ ಸಹಜ ಸ್ಥಿತಿಗೆ ಮರಳಿದ ಜಿಲ್ಲೆಯಲ್ಲಿ ನಾಲ್ಕನೇ ಅಲೆಯ ಭೀತಿ ಎದುರಾಗಿದೆ. ಈಗಾಗಲೇ ಮಹಾರಾಷ್ಟ್ರ, ಗುಜರಾತ್ ಇನ್ನಿತರ ರಾಜ್ಯಗಳಲ್ಲಿ ಒಮಿಕ್ರಾನ್‌ಗಿಂತ 10 ಪಟ್ಟು ಹೆಚ್ಚು ತೀವ್ರವಾಗಿ ಹರಡುವ ಉಪತಳಿ ಪತ್ತೆಯಾಗಿರುವುದರಿಂದ ಸಹಜವಾಗಿ ಆತಂಕ ಮನೆ ಮಾಡಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಗೆ ಬರುವುದರಿಂದ ಜಿಲ್ಲಾಡಳಿತವೂ ಹೆಚ್ಚಿನ ನಿಗಾವಹಿಸಿದೆ.

ಜಿಲ್ಲೆಯಲ್ಲಿ ಹರಡುವ ಭೀತಿ: ಜಿಲ್ಲೆಯ ನಾಲ್ಕೂ ತಾಲೂಕುಗಳು ಬೆಂಗಳೂರಿಗೆ ಹೊಂದಿಕೊಂಡಂತಿರುವುದರಿಂದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಹೊಸ ಪ್ರಭೇದದ ಕರೊನಾ ಜಿಲ್ಲೆಯಲ್ಲಿ ವೇಗವಾಗಿ ಹರಡಲಿದೆ ಎಂಬುದು ತಜ್ಞರ ಮುನ್ನೆಚ್ಚರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿದ್ದಾರೆ.

79,286 ದೃಢಪಟ್ಟ ಪ್ರಕರಣ: ಇದುವರೆಗೆ ಜಿಲ್ಲೆಯಲ್ಲಿ 79,286 ಸೋಂಕಿತ ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 2,562 ಪ್ರಕರಣ ಇತರ ಜಿಲ್ಲೆ ಹಾಗೂ ನೆರೆರಾಜ್ಯದ ನಿವಾಸಿಗಳದ್ದಾಗಿದೆ. ಈ ಪೈಕಿ 79,724 ಪ್ರಕರಣ ಜಿಲ್ಲಾ ನಿವಾಸಿಗಳದ್ದಾಗಿದೆ. ಈ 79,286 ಸೋಂಕಿತರ ಪೈಕಿ 78,372 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

10,01,218 ಟೆಸ್ಟಿಂಗ್: ಕರೊನಾ ಮೂರು ಅಲೆ ವೇಳೆ ಜಿಲ್ಲೆಯಲ್ಲಿ ಒಟ್ಟು 10,01,218 ಮಂದಿಯ ಕರೊನಾ ತಪಾಸಣೆ ನಡೆಸಿದ್ದು, ಇದರಲ್ಲಿ 79,286 ಮಂದಿಗೆ ಸೋಂಕು ದೃಢಪಟ್ಟಿತ್ತು. 9,22,053 ಮಂದಿಯ ತಪಾಸಣಾ ವರದಿ ನೆಗೆಟಿವ್ ಆಗಿದೆ. 121 ಮಂದಿಯ ಟೆಸ್ಟಿಂಗ್ ಲಿತಾಂಶ ಬರಬೇಕಿದೆ. ಹೊಸಕೋಟೆಯಲ್ಲಿ 5, ದೇವನಹಳ್ಳಿಯಲ್ಲಿ 25, ದೊಡ್ಡಬಳ್ಳಾಪುರ 4 ಹಾಗೂ ನೆಲಮಂಗಲ ತಾಲೂಕಿನಲ್ಲಿ 4 ಸೇರಿ ಜಿಲ್ಲೆಯಲ್ಲಿ ಒಟ್ಟು 38 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ಮಾಸ್ಕ್ ಮಾರಾಟ ಬಿರುಸು: ಈಗಾಗಲೇ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದು, ಧರಿಸದವರಿಗೆ ದಂಡ ಪ್ರಯೋಗವೂ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕರೊನಾ ನಿಯಮಗಳು ಜಾರಿಯಾಗಬಹುದೆಂಬ ಕಾರಣಕ್ಕೆ ಕಣ್ಮರೆಯಾಗಿದ್ದ ಮಾಸ್ಕ್ ಮಾರಾಟ ಬಿರುಸು ಪಡೆದಿದೆ. ಸರ್ಜಿಕಲ್ ಮಾಸ್ಕ್, ತರಹೇವಾರಿ ಬಣ್ಣಬಣ್ಣದ ಮಾಸ್ಕ್‌ಗಳು ಮಾರುಕಟ್ಟೆಗಳಿಗೆ ಲಗ್ಗೆ ಹಾಕುತ್ತಿವೆ.

ಸದ್ಯಕ್ಕೆ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಶೂನ್ಯದಲ್ಲಿದ್ದು ಆತಂಕಪಡುವ ಅಗತ್ಯವಿಲ್ಲ, ಆದರೆ ರೂಪಾಂತರಿ ತಳಿ ನಾಲ್ಕನೇ ಅಲೆ ರೂಪದಲ್ಲಿ ಮತ್ತೆ ಹರಡಬಹುದೆಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಅತ್ಯಗತ್ಯ. ಜನರು ಈ ಹಿಂದಿನಂತೆ ಸ್ವಯಂಪ್ರೇರಿತವಾಗಿ ಕರೊನಾ ನಿಯಮ ಪಾಲನೆ ಮಾಡಿದರೆ ಒಳಿತು. ಡಾ.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net