

ವಿಜಯಪುರ: ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸದ್ಯ ಟರ್ಮಿನಲ್ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ವರ್ಷ ಫೆಬ್ರವರಿ ಇಲ್ಲ ಮಾರ್ಚ್‌ನಲ್ಲಿ ವಿಮಾನ ನಿಲ್ದಾಣ ಹಾರಾಟಕ್ಕೆ ಸಜ್ಜುಗೊಳ್ಳಲಿದೆ. ವೈಯಕ್ತಿಕವಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಶೀಘ್ರ ಲೋಹದ ಹಕ್ಕಿಗಳ ಹಾರಾಟ ನಡೆಸಲು ಶ್ರಮಿಸುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ ವಿಜಯಪುರದಲ್ಲಿ ಆಗಬೇಕು ಎಂದು ಅವಿರತವಾಗಿ ತಾವು ಶ್ರಮಿಸಿದ್ದೇನೆ. ಅದರ ಫೌಂಡೇಷನ್ ಹಾಕಿದ್ದು ಸಹ ನಾವು. ಅದಕ್ಕೆ ಅನುದಾನ ರಾಜ್ಯ ಬಿಜೆಪಿ ಸರ್ಕಾರ ನೀಡಿದೆ. ಉಳಿದಂತೆ ಕೇಂದ್ರ ಬಿಜೆಪಿ ಸರ್ಕಾರ ಅನುಮತಿ ನೀಡಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ವಿಮಾನ ನಿಲ್ದಾಣ ಪೂರ್ಣ ಮಾಡಬಹುದಿತ್ತು. ಆದರೆ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಉದ್ದೇಶಿತ ವಿಮಾನ ನಿಲ್ದಾಣಕ್ಕೆ 347.92 ಕೋಟಿ ರೂ. ಹಣ ಮಂಜೂರಾಗಿದ್ದು ಅದರಲ್ಲಿ 253 ಕೋಟಿ ರೂ. ಖರ್ಚಾಗಿದೆ, ಈಗಾಗಲೇ ಟ್ಯಾಕ್ಸಿ ವೇ, ರನ್-ವೇ, ಐಸೋಲೇಷನ್ ಬೇ, ಒಳ ರಸ್ತೆ ಸಂಪರ್ಕ, ಆಂತರಿಕ ರಸ್ತೆ ಹಾಗೂ ಟರ್ಮಿನಲ್ ಕಾಮಗಾರಿ ಪ್ರಗತಿಯಲ್ಲಿದೆ, ಸದ್ಯ ವಿಮಾನ ಹಾರಾಟ ಮಾಡಬೇಕು ಎನ್ನುವುದು ನಮ್ಮ ಆಸೆ ಆಗಿದೆ. ಇದರಲ್ಲಿ ಕ್ರೆಡಿಟ್ ತೆಗೆದುಕೊಳ್ಳುವುದು ಮುಖ್ಯವಲ್ಲ ಎಂದರು.
ಕಳೆದ 9 ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ವಿಜಯಪುರ ಜಿಲ್ಲೆಯ ಕುಡಿಯುವ ನೀರಿಗೂ ಆದ್ಯತೆ ನೀಡಿದ್ದು, 11050.50 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದರು.
ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ರೈಲ್ವೇ ಜಾಲ ವಿಸ್ತರಣೆ, ರಸ್ತೆ ಸಂಪರ್ಕ ಸೇರಿದಂತೆ ಅನೇಕ ಭೌತಿಕ ಕಾಮಗಾರಿಗೆ ಆದ್ಯತೆ ನೀಡಿದಂತೆ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಸಂಕಲ್ಪವನ್ನು ಸಾಕಾರಗೊಳಿಸಿದ್ದು, ಕೇಂದ್ರ ಪುರಸ್ಕೃತ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನ ಸದ್ಭಳಕೆ ಮಾಡಿಕೊಳ್ಳಲಾಗಿದೆ ಎಂದರು.
ಅಮೃತ ಯೋಜನೆಯಡಿಯಲ್ಲಿ ವಿಜಯಪುರ ನಗರದ ನೀರು ಪೂರೈಕೆಗಾಗಿ 195.35 ಕೋಟಿ ರೂ. ಅನುದಾನ, ಅದೇ ತೆರನಾಗಿ ವಿಜಯಪುರ ನಗರದ ಆರು ಉದ್ಯಾನವನ ನಿರ್ಮಾಣಕ್ಕಾಗಿಯೂ ಈ ಯೋಜನೆಯಡಿಯಲ್ಲಿ 4 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ವಿವರಿಸಿದರು.
ಗ್ರಾಮೀಣ ಕುಡಿಯುವ ನೀರಿಗಾಗಿ ಜಲ ಜೀವನ್ ಮಿಷನ್ ಅಡಿಯಲ್ಲಿ ಭೌತಿಕವಾಗಿ 1016 ನಳಗಳ ಜೋಡಣೆಗಾಗಿ 406.25 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು. ಬಹುಹಳ್ಳಿ ಯೋಜನೆಯಡಿಯಲ್ಲಿ ಇಂಡಿ ತಾಲೂಕಿನ 76 ಗ್ರಾಮಗಳಲ್ಲಿ 110 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದರು.
ಜಲಕ್ಕೆ ಕೇಂದ್ರ ಸರ್ಕಾರ ಪ್ರಥಮಾದ್ಯತೆ ನೀಡುತ್ತಲೇ ಬಂದಿದ್ದು, ಈ ಹಿಂದಿನ ಯುಪಿಎ ಸರ್ಕಾರ ಜಲಶಕ್ತಿ ಮಂತ್ರಾಯಕ್ಕೆ 15265 ಕೋಟಿ ರೂ. ಹಣ ಖರ್ಚು ಮಾಡಿದ್ದರೆ, ಪ್ರಸ್ತುತ ಎನ್‌ಡಿಎ ಸರ್ಕಾರ ಕೇವಲ ಒಂದೇ ವರ್ಷ ಅವಧಿಯಲ್ಲಿ 97278 ಕೋಟಿ ರೂ. ಅಂದರೆ ಶೇ.537.26 ಕಿಂತ ಹೆಚ್ಚು ಅನುದಾನವನ್ನು ಖರ್ಚು ಮಾಡಿದೆ ಎಂದರು.
ಗಂಗಾ ನದಿ ಸ್ವಚ್ಛತೆಗಾಗಿ ಯುಪಿಎ ಸರ್ಕಾರ 938.57 ಕೋಟಿ ರೂ. ಖರ್ಚಾದರೆ, ಎನ್‌ಡಿಎ ಸರ್ಕಾರ ಕಳೆದ 2022ರ ಡಿಸೆಂಬರ್ ತಿಂಗಳವರೆಗೆ 32912.40 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು.
ಟಿಕೆಟ್ ಸಿಗುವುದಿಲ್ಲ ಎನ್ನುವದಕ್ಕೆ ಎಂಬಿಪಿ ಯಾರು?:
ನನಗೆ ಟಿಕೇಟ್ ಸಿಗುವುದು ಬಿಡುವುದು ಎಂ.ಬಿ. ಪಾಟೀಲರಿಗೆ ಸಂಬಂಧಿಸಿದ ವಿಷಯವಲ್ಲ, ಅವರು ನಮ್ಮ ಪಾರ್ಟಿಯಲ್ಲಿಲ್ಲ, ಬೇಕಾದರೆ ನಮ್ಮ ಪಾರ್ಟಿಗೆ ಬಂದು ಹೇಳಲಿ ಆಗ ನೋಡೋಣ, ಹಾಗೆಂದ ಮಾತ್ರಕ್ಕೆ ನಾನೇನೂ ಪಾಟೀಲರನ್ನು ಬಿಜೆಪಿಗೆ ಆಹ್ವಾನ ನೀಡುತ್ತಿಲ್ಲ. ನಮ್ಮಲ್ಲೇನೂ ನಾಯಕರ ಕೊರತೆ ಇಲ್ಲ, ನನಗೆ ಟಿಕೇಟ್ ಕೊಡುವುದು ಬಿಡುವುದು ನಮ್ಮ ಪಕ್ಷಕ್ಕೆ ಬಿಟ್ಟ ವಿಷಯ. ಅದು ಎಂ.ಬಿ. ಪಾಟೀಲರಿಗೆ ಸಂಬಂಧಿಸಿದ ವಿಷಯವಲ್ಲ ಎಂದು ಎಂಬಿಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ನಾನು ಕಾಂಗ್ರೆಸ್ ವಿರೋಧಿಯಾಗಿಯೇ ಜನ್ಮತಾಳಿದ್ದೇನೆ, ಕಾಂಗ್ರೆಸ್ ವಿರೋಧಿಯಾಗಿಯೇ ರಾಜಕಾರಣ ಮಾಡಿದ್ದೇನೆ, ಈಗ ಪಾರ್ಟಿ ಬದಲಾಯಿಸಿ ರಾಜಕಾರಣ ಮಾಡುವ ಔಚಿತ್ಯವೂ ನನಗಿಲ್ಲ, ಕಾಂಗ್ರೆಸ್ ಹೋಗುವ ಪ್ರಶ್ನೆಯೇ ಇಲ್ಲ, ಬಿಜೆಪಿ ಟಿಕೇಟ್ ಸಿಗುವುದು ಖಾತ್ರಿಯಾಗಿದೆ, ನನಗೂ ಸಹ ತಯಾರಿ ಮಾಡಿಕೊಳ್ಳುವಂತೆ ಸೂಚನೆಯೂ ಸಹ ದೊರಕಿದೆ, ಪಕ್ಷದವರು ಟಿಕೇಟ್ ನೀಡಿದರೆ ನಾನು ಚುನಾವಣೆಗೆ ಸ್ಪರ್ಧೆ ಮಾಡುವೆ, ಇಲ್ಲವಾದರೆ ಮನೆಯಲ್ಲಿಯೇ ಇರುವೆ ಎಂದರು.
ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.