ಸದ್ದಿಲ್ಲದೆ ಆರ್‌ಟಿಇ ಸೀಟು ಕಡಿತ: ಜಿಲ್ಲೆಯ 42 ಶಾಲೆಗಳಲ್ಲಿ 244 ಮಕ್ಕಳ ದಾಖಲಾತಿಗೆ ಅವಕಾಶ

8CBP2(DDPI office) (1)
Published on

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ

ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ 2022-23ನೇ ಸಾಲಿನಲ್ಲಿ ಜಿಲ್ಲೆಯ 42 ಶಾಲೆಗಳಲ್ಲಿ 244 ಸೀಟುಗಳನ್ನು ಮೀಸಲಿಡಲಾಗಿದೆ.

ಕಾಯ್ದೆ ಜಾರಿಯ ಪ್ರಾರಂಭದಲ್ಲಿ ನಿಗದಿತ ಸೀಟುಗಳು ಪ್ರಮಾಣವು 3 ಸಾವಿರ ಸನಿಹದಲ್ಲಿರುತ್ತಿತ್ತು. ಆದರೆ, ಇತ್ತೀಚೆಗೆ ಈ ಪ್ರಮಾಣ ಕಡಿಮೆಯಾಗಿದೆ. 2018-19ನೇ ಸಾಲಿನಲ್ಲಿ 2,751 ಸೀಟು ಮಂಜೂರಾಗಿತ್ತು. 2019-20ನೇ ಸಾಲಿನಲ್ಲಿ 209 ಸೀಟುಗಳಿಗೆ ಇಳಿಯಿತು. ಅಂದಿನಿಂದ ಇಲ್ಲಿಯವರೆಗೂ ಪ್ರತಿ ವರ್ಷ 250 ರೊಳಗೆ ನಿಗದಿಪಡಿಸುವಿಕೆ ಕಂಡು ಬರುತ್ತಿದೆ. ಹಾಗೆಯೇ ಈ ಬಾರಿಯು ಮಕ್ಕಳ ದಾಖಲಾತಿಯ ಸೀಟುಗಳ ಪ್ರಮಾಣದ ಕಡಿತದ ನಡುವೆ ಪಾಲಕರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ.

ದುಬಾರಿ ಡೊನೇಷನ್ ಪಾವತಿಸಿ ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಓದಿಸಲು ಹಲವರು ಆರ್ಥಿಕ ಸಂಕಷ್ಟ ಅನುಭವಿಸುತ್ತಾರೆ. ಇದರ ನಡುವೆ ಜಾರಿಗೆ ಬಂದ ಆರ್‌ಟಿಇ ಕಾಯ್ದೆಯಿಂದ ಸರ್ಕಾರಿ ಅನುದಾನದಲ್ಲಿಯೇ ಖಾಸಗಿ ಶಾಲೆಗೆ ದಾಖಲಿಸಲು ಪಾಲಕರಿಗೆ ಅವಕಾಶ ಸಿಕ್ಕಿತ್ತು. ಆದರೆ, ಬರು ಬರುತ್ತ ಕಡಿಮೆ ಪ್ರಮಾಣದ ಸೀಟು ನಿಗದಿ ಮತ್ತು ಕಠಿಣ ನಿಯಮಗಳ ಜಾರಿಯಿಂದ ಹೆಚ್ಚಿನ ಮಕ್ಕಳು ಸವಲತ್ತಿನಿಂದ ವಂಚಿತರಾಗುವಂತಾಗಿದೆ. ಮತ್ತೊಂದೆಡೆ ಕಾಯ್ದೆ ಜಾರಿಯ ನಡುವೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹಂತ ಹಂತವಾಗಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಪಾಲಕರಲ್ಲಿ ಖಾಸಗಿ ಶಾಲೆಗಳ ವ್ಯಾಮೋಹ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವ್ಯಾಪ್ತಿಯಲ್ಲಿರುವ ಮಕ್ಕಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿರುವ ನಿಯಮ ರೂಪಿಸಲಾಗಿದೆ.

ಆರ್‌ಟಿಒ ಸೀಟಿನ ಅನುಕೂಲ: ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಶ್ರೀಮಂತರ ಮಕ್ಕಳೊಂದಿಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುವಂತಾಗಲು ಆರ್‌ಟಿಸಿ ಕಾಯ್ದೆ ಜಾರಿಗೆ ತರಲಾಗಿದೆ. ಇದರಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಸೀಟುಗಳನ್ನು ಮೀಸಲಿರಿಸಿದ್ದು, ಇಲ್ಲಿ ಆಯ್ಕೆಯಾದ ಅರ್ಹ ಮಕ್ಕಳಿಗೆ ಸರ್ಕಾರದ ಅನುದಾನದಲ್ಲಿ ಉಚಿತ ಶಿಕ್ಷಣ ದೊರೆಯಲಿದೆ.

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: 2022-23ನೇ ಸಾಲಿನ ಆರ್‌ಟಿಇ ಅಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಅನುದಾನರಹಿತ ಶಾಲೆಗಳಲ್ಲಿನ ಶೇ.25ರಷ್ಟು ಮೀಸಲಿಟ್ಟ ಸೀಟುಗಳ ದಾಖಲಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮಾ.15ಕ್ಕೆ ವಿಸ್ತರಿಸಲಾಗಿದೆ. ಈ ಮೊದಲು ಮಾ.3ಕಡೇ ದಿನವಾಗಿತ್ತು. ಎಲ್‌ಕೆಜಿ ಹಾಗೂ 1ನೇ ತರಗತಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ವೇಳೆ ಮಗುವಿನ ಭಾವಚಿತ್ರ, ಜನನ ಪ್ರಮಾಣಪತ್ರ, ಮಗುವಿನ ಹಾಗೂ ಪಾಲಕರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಜಿಲ್ಲೆಯಲ್ಲಿನ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಇಲ್ಲವೇ ಒಂದನೇ ತರಗತಿಗೆ ದಾಖಲಾತಿ ಪಡೆಯುವ ಆರ್‌ಟಿಇನಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಕೆ.ಎಂ.ಜಯರಾಮರೆಡ್ಡಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕ, ಚಿಕ್ಕಬಳ್ಳಾಪುರ ***** ದುಬಾರಿ ಡೊನೇಷನ್ ಪಾವತಿಸಿ ಖಾಸಗಿ ಶಾಲೆಯಲ್ಲಿ ಮಗುವನ್ನು ಓದಿಸುವ ಶಕ್ತಿ ಇಲ್ಲ. ಮಗುವಿನ ವಯಸ್ಸಿನ ನಿಯಮಕ್ಕೆ ಸಂಬಂಧಿಸಿದಂತೆ ಕೇವಲ 20 ದಿನ ವ್ಯತ್ಯಾಸ ಉಂಟಾದ ಹಿನ್ನೆಲೆಯಲ್ಲಿ ಆರ್‌ಟಿಇ ಕಾಯ್ದೆ ಸವಲತ್ತಿನಿಂದ ವಂಚಿತರಾಗುವಂತಾಗಿದೆ. ಜಡಲತಿಮ್ಮನಹಳ್ಳಿ ಮುನಿರಾಜು, ಸವಲತ್ತು ವಂಚಿತ ಮಗುವಿನ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net