ಸದ್ಗುಣಗಳನ್ನು ಮೈಗೂಡಿಸಿಕೊಳ್ಳಿ: ಹೆಚ್.ಪಿ.ಸ್ವರೂಪ್

ಸದ್ಗುಣಗಳನ್ನು ಮೈಗೂಡಿಸಿಕೊಳ್ಳಿ: ಹೆಚ್.ಪಿ.ಸ್ವರೂಪ್
Published on

ಹಾಸನ: ಬಾಲ್ಯದಿಂದಲೇ ಶ್ರದ್ಧೆ, ತಾಳ್ಮೆ, ಶ್ರಮ ಮತ್ತು ಪ್ರಾಮಾಣಿಕತೆಯ ಗುಣಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ ಎಂದು ಶಾಸಕ ಹೆಚ್.ಪಿ.ಸ್ವರೂಪ್ ತಿಳಿಸಿದರು.

ನಗರದಲ್ಲಿ ಜಿಲ್ಲಾ ದೇವಾಂಗ ನೌಕರರ ಸಂಘ, ದೇವರ ದಾಸಿಮಯ್ಯ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ದೇವಾಂಗ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಸದ್ಗುಣಗಳನ್ನು ಮೈಗೂಡಿಸಿಕೊಂಡು ಹೋರಾಟ ನಡೆಸಿದರೆ ನಮ್ಮ ಗುರಿ ಮುಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ನನ್ನ ತಂದೆ ಹೆಚ್.ಎಸ್.ಪ್ರಕಾಶ್ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಲು ದೇವಾಂಗ ಸಮುದಾಯದವರ ಸಹಕಾರ ಹೆಚ್ಚಿದೆ. ಆ ಪ್ರೀತಿ, ವಿಶ್ವಾಸ ಈಗ ನನ್ನ ಮೇಲೂ ತೋರಿದ್ದರಿಂದ ಶಾಸಕನಾಗಲು ಸಾಧ್ಯವಾಗಿದೆ. ದೇವಾಂಗ ಜನಾಂಗಕ್ಕೆ ನಿವೇಶನ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ದೊಡ್ಡ ವ್ಯಕ್ತಿಗಳನ್ನಾಗಿ ಬೆಳೆಸಲು ಬಯಸುತ್ತಾರೆ. ಅದೇ ರೀತಿ ಮಕ್ಕಳು ಕೂಡ ಜೀವನದಲ್ಲಿ ಛಲದೊಂದಿಗೆ ಮುನ್ನಡೆಯುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೇಳಿದರು.

ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕಿ ನಾಗಶ್ರೀ ತ್ಯಾಗರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆ ಉಪ ಆಯುಕ್ತ ಡಿ.ನಾಗೇಶ್ ಕುಮಾರ್, ದೇವಾಂಗ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ದೇವಾಂಗ ನೌಕರರಿಗೆ ಸನ್ಮಾನಿಸಲಾಯಿತು. ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷ ಬಿ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಕೆ.ಧರ್ಮೇಶ್, ಹಿಮ್ಸ್ ಸಹ ಪ್ರಾಧ್ಯಾಪಕ ಡಾ.ಹಾಲೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net