ಸದೃಢ ಭಾರತಕ್ಕೆ ಸಂವಿಧಾನ ಪಾಲನೆ ಅಗತ್ಯ

26 HANUR 2
Published on

ಚಾಮರಾಜನಗರ : ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಿ ಪಾಲಿಸುವ ಮೂಲಕ ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂದು ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ತಿಳಿಸಿದರು.


ಹನೂರು ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಭಾನುವಾರ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.


ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಸ್ತಾವನೆಯು 1949ರಲ್ಲಿ ಅಂಗೀಕಾರವಾಯಿತು. ಹಾಗಾಗಿ, ಈ ದಿವಸವನ್ನು ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ.

ಸಂವಿಧಾನವು ದೇಶದ ಐಕ್ಯತೆಯ ಪ್ರತೀಕವಾಗಿದ್ದು, ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವವನ್ನು ಸಾರುತ್ತದೆ. ಈ ಮೂಲಕ ದೇಶದ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತಿದೆ.

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೂಲಕ ಸುಭದ್ರ ಆಡಳಿತವನ್ನು ನೀಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನದ ಅಡಿಯಲ್ಲೇ ಕಾರ್ಯನಿರ್ವಹಿಸಬೇಕಿದೆ

ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸಂವಿಧಾನವನ್ನು ಓದುವುದರ ಮೂಲಕ ಅದರ ಆಶಯಗಳನ್ನು ಅಳವಡಿಸಿಕೊಂಡು ಪಾಲಿಸಬೇಕು. ದೇಶದ ಉನ್ನತಿಗೆ ಶ್ರಮಿಸಬೇಕು ಎಂದು ತಿಳಿಸಿದರು.


ಇದೇ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕವನ್ನು ವಿತರಿಸಲಾಯಿತು. ಆರ್‌ಐ ಶಿವಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ರಾಜು, ಶೇಷಣ್ಣ, ಗ್ರಾಮ ಸಹಾಯಕ ಸಿದ್ದರಾಜು, ವಿದ್ಯಾರ್ಥಿ ನಿಲಯ ಪಾಲಕರಾದ ವಿಜಯಕುಮಾರ್, ಸುಂದ್ರಮ್ಮ ಹಾಗೂ ಕಚೇರಿ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net