ಸದುಪಯೋಗವಾಗಲಿ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ

CTD DEVARAJA ARAS----
Published on

ಚಿತ್ರದುರ್ಗ: ಸಣ್ಣ ಹಳ್ಳಿಯಿಂದ ಬಂದು ಚಿತ್ರದುರ್ಗದಲ್ಲಿ ದೇವರಾಜ ಅರಸು ಶಿಕ್ಷಣ ಸಂಸ್ಥೆ ಕಟ್ಟಿ ಹೆಮ್ಮರವಾಗಿ ಬೆಳೆಸಿರುವ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರ ಸಾಧನೆ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಎಸ್‌ಜೆ ಕಲ್ಯಾ ಣ ಮಂಟಪದಲ್ಲಿ ಸೋಮವಾರ ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಸ್ಥಾಪಿಸಿರುವ ‘ಕ್ರಿಯಾ’ ಕೌಶಲಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗಾವಕಾಶ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆ 45 ವರ್ಷಗಳನ್ನು ಪೂರೈಸಿದೆ. ಹಿಡಿದ ಕೆಲಸವನ್ನು ಹಠ ಬಿಡದೆ ಸಾಧಿಸುವ ಛಲ ಚಂದ್ರಪ್ಪ ಅವರಲ್ಲಿದೆ. ನೂತನ ಕೇಂದ್ರ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಇದರ ಪ್ರಯೋಜನ ಪಡೆದು ಭವಿಷ್ಯ ಕಂಡುಕೊಳ್ಳಬೇಕು ಎಂದರು.

ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ, ಸಂಸ್ಥೆಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಉದ್ಯೋಗಾವಕಾಶ ಕಲ್ಪಿಸಲು ಈ ಕೇಂದ್ರ ನೆರವಾಗಲಿದೆ. ಶಿಕ್ಷಣದ ಜತೆ ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡುವುದು ಕೇಂದ್ರದ ಉದ್ದೇಶವಾಗಿದೆ ಎಂದರು.

ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ. ರಘುಚಂದನ್ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕೇಂದ್ರ ಸ್ಥಾಪನೆ ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದರು.

ಬಡವ-ಶ್ರೀಮಂತ ಎನ್ನುವ ತಾರತಮ್ಯವಿಲ್ಲದೆ ಎಲ್ಲರಿಗೂ ಉತ್ತಮ ಶಿಕ್ಷಣ ಸಿಗಬೇಕು. ವಿದ್ಯಾರ್ಥಿಗಳಲ್ಲಿ ಅಹಂ ಇರಬಾರದು. ಸಂಸ್ಥೆ ಕಟ್ಟಿ ಮುನ್ನಡೆಸುತ್ತಿರುವ ನನ್ನ ತಂದೆ ಚಂದ್ರಪ್ಪ ಅವರೇ ನನಗೆ ರೋಲ್ ಮಾಡಲ್. ಹಣಕ್ಕಾಗಿ ಈ ಸಂಸ್ಥೆ ಸ್ಥಾಪಿಸಿಲ್ಲ. ಬಡ ಮಕ್ಕಳಿಗೆ ಶಿಕ್ಷಣದ ಜತೆ ಕೌಶಲ ನೀಡಿ ಸ್ವಾವಲಂಬಿಗಳನ್ನಾಗಿಸುವುದು ನಮ್ಮ ಗುರಿ ಎಂದರು.

ಮೈರಾ ಅಕಾಡೆಮಿ ಸಂಸ್ಥಾಪಕ ಹೈದರಾಬಾದ್‌ನ ಡಾ. ಮನಿಷ್‌ಜಾ, ಕೋ ಫೌಂಡರ್ ಸುಧಾ ದೇವರಾಜ್, ಸಾರ್ವಜನಿಕ ಸಂಪರ್ಕಾಧಿಕಾರಿ ಕೋಟ್ಲ ಸುನಿಲ್, ಸಂಸ್ಥೆ ಡೀನ್ ಡಾ.ಬಿ.ಸಿ. ಅನಂತರಾಮು, ಪ್ರಾಚಾರ್ಯರಾದ ಡಾ.ಕೆ.ಪಿ. ನಾಗಭೂಷಣಶೆಟ್ಟಿ, ಡಾ.ಎ.ಜೆ. ಶಿವಕುಮಾರ್, ಡಾ.ಎಂ.ಎಂ. ಮಹಾಂತೇಶ್, ಡಾ.ಆರ್.ಕೆ. ಮಹಮದ್ ಮುತಾಹರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net