ಸದುಪಯೋಗಕ್ಕೆ ಬಾರದ ಜೆಜೆಎಂ ಯೋಜನೆ

Published on

ಬಳ್ಳಾರಿ : ಪ್ರತಿ ಮನೆಗೆ ಶುದ್ಧ ಕುಡಿಯಲು ಹಾಗೂ ಸಾರ್ವಜನಿಕರು ಮಿತವ್ಯಯ ಬಳಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜೆಜೆಎಂ ಯೋಜನೆ ಹಲವು ಕಡೆಗಳಲ್ಲಿ ಅರೆ ಕಾಮಗಾರಿಯಿಂದ ಜನರು ಬೇಸತ್ತಿದ್ದಾರೆ.
ದೀರ್ಘಕಾಲ ಬಾಳಿಕೆ ಬಾರದ ಪೈಪ್ ಬಳಕೆ, ಕಾಮಗಾರಿ ನಡೆಯುವ ಮುನ್ನವೇ ಹಲವಡೆ ಒಡೆದು ಹೋದ ಪೈಪ್, ಕೆಲವೇ ದಿನಗಳಿಗೆ ಹಾಳಾದ ನಲ್ಲಿ, ಮುರಿದು ಚರಂಡಿ ಸೇರಿದ ‘ ಮನೆ ಮನೆ ಗಂಗೆ ’ ನಾಮಫಲಕ, ಪೈಪ್‌ಲೈನ್ ಕಾಮಗಾರಿಗಾಗಿ ಅಗೆದು ಹಾಗೆ ಬಿಟ್ಟಿರುವ ರಸ್ತೆ, ಒಂದು ಮನೆಗೆ ಎರಡು ನಲ್ಲಿ ಸಂಪರ್ಕ, ನಲ್ಲಿ ಅಳವಡಿಸಿ ವರ್ಷ ಕಳೆದರೂ ಬಾರದ ನೀರು. ಇದು ಜಲ ಜೀವನ್ ಮಿಷನ್( ಜೆಜೆಎಂ ) ಯೋಜನೆಯಡಿ ಜಿಲ್ಲೆಯ ವಿವಿಧಡೆ ನಡೆಯುತ್ತಿರುವ ಕಾಮಗಾರಿ ಸ್ಥಿತಿಗತಿ.
ವಿವಿಧ ಗ್ರಾಮಗಳ ಬೀದಿಗಳಲ್ಲಿ ಕೆಲ ಕಿ. ಮೀ.ಗಳಷ್ಟೇ ಪೈಪ್ ಅಳವಡಿಸಿ, ಹೆಚ್ಚಿನ ಕಿ. ಮೀ. ಅಳವಡಿಸಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಗುಣಮಟ್ಟದ ಪೈಪ್ ಬದಲಿಗೆ, ಕಳೆಪ ಗುಣಮಟ್ಟದ ಪೈಪ್ ಅಳವಡಿಸಿದ್ದು, ಕೆಲವೇ ದಿನಗಳಲ್ಲಿ ಹಾಳಾಗಲಿವೆ. ಭೂಮಿಯ ಆಳದಲ್ಲಿ ಅಳವಡಿಸಬೇಕಾದ ಪೈಪ್ ರಸ್ತೆಯ ಮೇಲೆ ಕಾಣುತ್ತಿದೆ. ಒಂದು ಚಿಕ್ಕ ವಾಹನ ಸಂಚರಿಸಿದರೂ ಪೈಪ್ ಒಡೆದು ಹಾಳಾಗುತ್ತದೆ. ಮಣ್ಣಿನಲ್ಲಿ ಹಾಕಿರುವ ಪೈಪ್ ಗುಣಮಟ್ಟ ಯಾರಿಗೂ ಕಾಣಿಸುವುದಿಲ್ಲ. ನಲ್ಲಿ ಗುಣಮಟ್ಟ ಕೇಳುವಂತೆಯೇ ಇಲ್ಲ ಎಂಬ ಆರೋಪ ಪ್ರತಿ ಗ್ರಾಮದಲ್ಲಿಯೂ ಕೇಳಿ ಬಂದಿದೆ. ಗ್ರಾಪಂ ಸದಸ್ಯರು, ಸಾರ್ವಜನಿಕರು ಪ್ರಶ್ನಿಸಿದ ಕಡೆಗಳಲ್ಲಿ ಅಲ್ಪಸ್ವಲ್ಪ ಗುಣಮಟ್ಟದ ಕೆಲಸ ನಡೆದಿದೆ. ಅದನ್ನು ಹೊರತುಪಡಿಸಿದರೆ ಬಹುತೇಕ ಕಡೆಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಇದೊಂದು ಹಣ ಕೊಳ್ಳೆ ಹೊಡೆಯುವ ಯೋಜನೆಯಾಗಿದೆ. ಜೆಜೆಎಂ ನಲ್ಲಿ ಪ್ರತಿ ಗ್ರಾಪಂ ಮಟ್ಟದಲ್ಲೂ ಲಕ್ಷಾಂತರ ರೂ. ಅಕ್ರಮ ನಡೆದಿದೆ. ಅಧಿಕಾರಿಗಳು, ಗುತ್ತಿಗೆದಾರರ ಜೇಬು ಚೆನ್ನಾಗಿ ಭರ್ತಿಯಾಗಿದೆ. ಜನರಿಗೆ ಅನುಕೂಲವಾಗುವಂತಹ ಕೆಲಸಗಳು ನಡೆದಿಲ್ಲ ಎಂದು ಹಲವು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಪ ಹಂತದಿಂದ ಹಿಡಿದು ತಾಲೂಕು, ಜಿಪಂ ಹಾಗೂ ಮೇಲ್ಮಟ್ಟದ ಎಲ್ಲ ಅಧಿಕಾರಿಗಳಿಗೂ ಯೋಜನೆಯಲ್ಲಿ ಭಾರಿ ಅಕ್ರಮ ನಡೆಯುತ್ತಿದೆ ಎಂಬುದು ತಿಳಿದಿದೆ. ಅದರೂ ಯಾರೊಬ್ಬರೂ ಕ್ರಮ ಕೈಗೊಳ್ಳೂತ್ತಿಲ್ಲ ಎಂದು ಸಾರ್ವಜನಿಕರು ಅಕ್ರೋಶ ಹೊರ ಹಾಕಿದ್ದಾರೆ.
ಇಲ್ಲಿಯವರೆಗೆ ನಡೆದಿರುವ ಪ್ರತಿ ಕಾಮಗಾರಿಯನ್ನು ಮೂರನೇ ವ್ಯಕ್ತಿಯಿಂದ ಪರಿಶೀಲನೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇನ್ನು ಮುಂದೆ ಬಿಲ್ ಪಾವತಿಗೂ ಮುನ್ನ ಮೂರನೇ ವ್ಯಕ್ತಿ ಪರಿಶೀಲಿಸಿ ದೃಢಪಡಿಸಿದ ನಂತರ ಹಣ ಬಿಡುಗಡೆ ಮಾಡಬೇಕು ಎಂಬುದು ಹಲವರ ಒತ್ತಾಯವಾಗಿದೆ.

717 ಕೋಟಿ ರೂ. ವೆಚ್ಚ : ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಗೆ ಒಟ್ಟು 717 ಕೋಟಿ ರೂ. ವ್ಯಯಿಸಲಾಗುತ್ತಿದೆ. ನಾಲ್ಕು ಹಂತದಲ್ಲಿ ಜಿಲ್ಲೆಯ ಬಳ್ಳಾರಿ, ಕುರುಗೋಡು, ಕಂಪ್ಲಿ, ಸಿರಗುಪ್ಪ, ಸಂಡೂರು ಸೇರಿ ಒಟ್ಟು 1,43,329 ಲಕ್ಷ ನಲ್ಲಿ ಸಂಪರ್ಕ ಗುರಿ ಹೊಂದಲಾಗಿದೆ. ಸದ್ಯ ಐದು ತಾಲೂಕುಗಳು ಸೇರಿ 1,36,403 ನಲ್ಲಿಗಳನ್ನು ಸಂಪರ್ಕಿಸಲಾಗಿದೆ. ಈಗಾಗಲೇ ಒಂದು ಮತ್ತು ಎರಡನೆಯ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಮೂರು ಮತ್ತು ನಾಲ್ಕನೆಯ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ತಿಳಿಸಿದರು. ಇಲ್ಲಿಯವರೆಗೆ ಶೇ. 64 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅಂಕಿ ಅಂಶಗಳಲ್ಲಿ ವಿವರಿಸಲಾಗಿದೆ. ಆದರೆ, ಒಂದು ಜೆಜೆಎಂ ನಲ್ಲಿಯ ಮೂಲಕ ಕುಡಿಯುವ ನೀರು ಯಾರ ಮನೆಗೆ ತಲುಪುತ್ತಿಲ್ಲ ಎಂಬುದು ವಾಸ್ತವ ಅಂಶವಾಗಿದೆ.

ಕೋಟ್…. ಜಿಲ್ಲೆಯಲ್ಲಿ ಜೆಜೆಎಂ ಯೋಜನೆಯು ಸಂಪೂರ್ಣ ವಿಫಲವಾಗಿದೆ. ಈ ಯೋಜನೆಯಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಿಲ್ಲ.

  • ಜೆ. ಎನ್. ಗಣೇಶ, ಶಾಸಕ, ಕಂಪ್ಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net