ಸದಾಶಿವಾನಂದ ಸ್ವಾಮೀಜಿ ಅಧ್ಯಾತ್ಮ ಕ್ರಾಂತಿ ಮಾಡಲಿ

22-gdg-8
Published on

ಗದಗ: ಶಿವಾನಂದ ಬ್ರಹನ್ಮಠದ ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಆಳ ಅಧ್ಯಯನಶೀಲ ಪ್ರವೃತ್ತಿಯವರು. ಸದಾ ಸಮಾಜಮುಖಿಯಾಗಿ ಆಲೋಚನೆ ಮಾಡುವ ಕ್ರಿಯಾಶೀಲರು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ಶಿವಾನಂದ ಮಠದಲ್ಲಿ ಶ್ರಿ ಶಿವಾನಂದ ಸ್ವಾಮೀಜಿ ಅವರ 99ನೇ ಜಾತ್ರಾ ಮಹೋತ್ಸವ ಹಾಗೂ ನೂತನ ಜಗದ್ಗುರುಗಳ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನೂತನ ಶ್ರೀಗಳು ತಮ್ಮ ಪ್ರಭಾವದ ಮೂಲಕ ಈ ಭಾಗದಲ್ಲಿ ಅಧ್ಯಾತ್ಮ ಕ್ರಾಂತಿ ಮಾಡಲಿ ಎಂದು ಹಾರೈಸಿದರು.

ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಮಾತನಾಡಿ, ಕೈವಲ್ಯಾನಂದ ಶ್ರೀಗಳನ್ನು ನಮ್ಮ ಬೆಳಗಾವಿ ಜಿಲ್ಲೆಯಿಂದ ಕಳೆದುಕೊಂಡ ಅನಾಥ ಭಾವ ಕಾಡುತ್ತದೆ. ಆದರೂ ಗದಗನ ಶಿವಾನಂದಮಠಕ್ಕೆ ನೂತನ ಜಗದ್ಗುರುಗಳಾಗಿದ್ದು ಹೆಮ್ಮೆಯ ವಿಷಯ. ನೂತನ ಶ್ರೀಗಳು ತಮ್ಮಲ್ಲಿರುವ ವಿದ್ವತ್ತನ್ನು ಗದಗ ಜಿಲ್ಲೆಯ ಜನರಿಗೆ ಉಣಬಡಿಸಬೇಕು. ಯುವ ಸಮೂಹವನ್ನು ಅಧ್ಯಾತ್ಮದತ್ತ ಕರೆದೊಯ್ಯಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಶಿವಾನಂದ ಮಠ ಜಾತ್ಯತೀತ ಮಠವಾಗಿದ್ದು, ಐತಿಹಾಸಿಕ ಪರಂಪರೆ ಹೊಂದಿದೆ. ಇಂತಹ ಮಠಕ್ಕೆ ಅಪಾರ ಪಾಂಡಿತ್ಯ ಹೊಂದಿರುವ ಸದಾಶಿವಾನಂದ ಸ್ವಾಮೀಜಿ ಪೀಠಾರೋಹಣ ಮಾಡಿದ್ದು ಸಂತಸ ತಂದಿದೆ. ಶ್ರೀಗಳು ರಚನಾತ್ಮಕ ಕಾರ್ಯಗಳ ಮೂಲಕ ಮಠವನ್ನು ಮುನ್ನಡೆಸಲಿ ಎಂದರು.

ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಅಭಿನವ ಶಿವಾನಂದ ಸ್ವಾಮೀಜಿ ಎಲ್ಲರನ್ನೂ ಒಗ್ಗೂಡಿಸಿ ಮಠವನ್ನು ಜಾತ್ಯತೀತ ಮಠವನ್ನಾಗಿ ರೂಪಿಸಿದ್ದಾರೆ. ಅದೇ ಪರಂಪರೆಯಲ್ಲಿ ಶ್ರೀಮಠ ಮುನ್ನಡೆಯಬೇಕು ಎಂಬುದ ನಮ್ಮೆಲ್ಲರ ಅಪೇಕ್ಷೆಯಾಗಿದೆ. ಬಡವರಿಗೆ, ದೀನರಿಗೆ ಆಶ್ರಯ ನೀಡಿದ ಕರುಣಾಮಯಿ ಮಠ ಇದಾಗಿದೆ. ಅಸಂಖ್ಯಾತ ಬಡ ಭಕ್ತರು ಶ್ರೀಮಠದ ನೆರಳಿನಲ್ಲಿ ಬದುಕುತ್ತಿದ್ದಾರೆ. ಅಭಿನವ ಶಿವಾನಂದ ಸ್ವಾಮೀಜಿ ಅವರು ಮಾತೃಹೃದಯಿಯಾಗಿದ್ದರಿಂದ ಇದು ಸಾಧ್ಯವಾಗಿದೆ. ನೂತನ ಶ್ರೀಗಳ ಆಲೋಚನೆ ದೊಡ್ಡದಿದ್ದು, ಅದರ ಸಾಕಾರಕ್ಕೆ ನಾವೆಲ್ಲರೂ ಸಹಕಾರ ನೀಡುತ್ತೇವೆ. ಯುವಕರಿಗೆ ಸಂಸ್ಕೃತಿ, ಸಂಸ್ಕಾರ ನೀಡುವ ಆಲೋಚನೆ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದರು.

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಅಭಿನವ ಶಿವಾನಂದ ಸ್ವಾಮೀಜಿ ರಾಜ್ಯದಲ್ಲಿಯೇ ಅತ್ಯುತ್ತಮ ಆಯುರ್ವೆದ ಕಾಲೇಜ್ ಸ್ಥಾಪಿಸಿ ಮುನ್ನಡೆಸಿದ್ದು, ಅದರ ಮುಂದುವರಿದ ಭಾಗವಾಗಿ ನೂತನ ಶ್ರೀಗಳು ಆಯುರ್ವೆದ ಸಂಶೋಧನಾ ಕೇಂದ್ರ ಆರಂಭಿಸಬೇಕು. ಕಪ್ಪತಗುಡ್ಡದಲ್ಲಿ ಸಿಗುವಂತಹ ಔಷಧೀಯ ಗಿಡಮೂಲಿಕೆಗಳ ಸಂಶೋಧನಾ ಕೇಂದ್ರ ಆರಂಭಿಸುವ ಜರೂರತ್ತು ಇದೆ. ಆ ನಿಟ್ಟಿನಲ್ಲಿ ನೂತನ ಶ್ರೀಗಳು ಯೋಚಿಸಲಿ ಎಂದರು.

ಹುಲ್ಯಾಳದ ಹರ್ಷಾನಂದ ಸ್ವಾಮೀಜಿ, ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ, ಅಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ ಅಸುಂಡಿ ಮಾತನಾಡಿದರು.

ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ನರೇಂದ್ರಜೀ, ಇತರರಿದ್ದರು. ನೂತನ ಶ್ರೀಗಳಿಗೆ ಗೌರವಾರ್ಥವಾಗಿ ಬಸವಪ್ರಸಾದ ಜೊಲ್ಲೆ ಮತ್ತು ಸ್ನೇಹಿತರು ಬೆಳ್ಳಿ ಸಿಂಹಾಸನ ಅರ್ಪಿಸಿದರು. ಘೋಡಗೇರಿಯ ಶ್ರೀ ಮಲ್ಲಯ್ಯ ಸ್ವಾಮೀಜಿ ನಿರೂಪಿಸಿದರು. ಹಲವಾರು ಭಕ್ತರು ನೂತನ ಶ್ರೀಗಳಿಗೆ ಶಾಲು ಹೊದಿಸಿ, ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net