ಸದಾಶಿವ, ಕಾಂತರಾಜ್ ಆಯೋಗ ವರದಿ ಜಾರಿಗೊಳಿಸಿ

Pressmeet
Published on

ಚಿತ್ರದುರ್ಗ: ಸಚಿವ ಸಂಪುಟದಲ್ಲಿ ಚರ್ಚಿಸಿ ನ್ಯಾ. ಸದಾಶಿವ, ಕಾಂತರಾಜ್ ಆಯೋಗದ ವರದಿ ಜಾರಿಗೆ ಸಿಎಂ ಸಿದ್ದರಾಮಯ್ಯ ಮುಂದಾಗಬೇಕು. ಆ ನಿಟ್ಟಿನಲ್ಲಿ ಒತ್ತಾಯಿಸುತ್ತಿದ್ದೇವೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಸಿಯೊಳಗೆ ಪ್ರಬಲರ ಮಧ್ಯೆ ಪೈಪೋಟಿ ನಡೆಸಿ, ಸೌಲಭ್ಯ ಪಡೆಯಲು ಮಾದಿಗ ಸಮುದಾಯಕ್ಕೆ ಸಾಧ್ಯವಾಗದೆ, ವಂಚಿತವಾಗಿದೆ. ಶಿಕ್ಷಣ ಮತ್ತು ಉದ್ಯೋಗವಿಲ್ಲದೆ, ಈಗಲೂ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಪ್ರತ್ಯೇಕ ಮೀಸಲಾತಿ ಕಲ್ಪಿಸಲು ಮೂರು ದಶಕಗಳಿಂದ ಹೋರಾಟವೂ ನಡೆದಿದೆ. ನ್ಯಾಯ ಸಿಗಬೇಕಾದರೆ, ಒಳಮೀಸಲು ಜಾರಿಯಾಗಬೇಕಿದೆ ಎಂದರು.

ಹೋರಾಟಗಾರರು ರಾಜ್ಯದ ಎಲ್ಲ ಶಾಸಕರ, ಸಚಿವರ ಮನೆ ಮುಂದೆ ಧರಣಿ ನಡೆಸಿ, ಅವರಿಂದ ಒಳಮೀಸಲು ಜಾರಿ ಸಂಬಂಧ ಸಿಎಂಗೆ ಒತ್ತಾಯಿಸುವಂತೆ ಪಕ್ಷಾತೀತವಾಗಿ ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಡ ಹಾಕಬೇಕಿದೆ ಎಂದು ಸಲಹೆ ನೀಡಿದರು.

ಅ. 15ರಂದು ಮತ್ತೊಮ್ಮೆ ಸಿಎಂ ಅವರನ್ನು ಭೇಟಿ ಮಾಡಲಿದ್ದೇವೆ. ಅಗತ್ಯಬಿದ್ದರೆ, ರಾಹುಲ್‌ಗಾಂಧಿ ಅವರ ಬಳಿಯೂ ಒಳಮೀಸಲು ಜಾರಿಯಿಂದ ಸಮುದಾಯಕ್ಕೆ ಆಗುವ ಅನುಕೂಲಗಳ ಕುರಿತು ಮನದಟ್ಟು ಮಾಡುತ್ತೇವೆ. ವಿಳಂಬವಾದಲ್ಲಿ ಬೀದಿಗಿಳಿದು ಹೋರಾಟಕ್ಕೂ ಸಿದ್ಧ. ಅಲ್ಲಿಯವರೆಗೂ ಯಾವ ಕಾರಣಕ್ಕೂ ಬಂದ್, ರಸ್ತೆ ತಡೆ, ಜನಪ್ರತಿನಿಧಿಗಳಿಗೆ ಮುತ್ತಿಗೆ, ೇರಾವ್ ಹಾಕುವುದು ಬೇಡ ಎಂದು ಹೋರಾಟಗಾರರಲ್ಲಿ ಕೋರಿದರು.

ಕಾಂತರಾಜ್ ಆಯೋಗದ ವರದಿ ಜಾರಿಯಿಂದ ನೊಂದ ಸಮುದಾಯಗಳಿಗೂ ನ್ಯಾಯ ಸಿಗುವ ವಿಶ್ವಾಸವಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಈಡೇರಿಸುವ ನಂಬಿಕೆ ಇದೆ. ತಾಳ್ಮೆಯಿಂದ ಕಾಯೋಣ ಎಂದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಒಳಮೀಸಲು ಜಾರಿಗೆ ಪ್ರಕ್ರಿಯೆ ಆರಂಭಿಸಿದ್ದು, ಕಾಂಗ್ರೆಸ್. ಅದನ್ನು ಸಿದ್ದರಾಮಯ್ಯ ಅವಧಿಯಲ್ಲೇ ಅನುಷ್ಠಾನಗೊಳಿಸಲು ಬದ್ಧ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಪಂ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ನರಸಿಂಹರಾಜು, ಮುಖಂಡರಾದ ಎಚ್.ಅಂಜಿನಪ್ಪ, ಎನ್.ಡಿ.ಕುಮಾರ್, ಕೆ.ಪಿ.ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ಮುದಾಸೀರ, ರವಿಚಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net