

ಚಿತ್ರದುರ್ಗ: ನ್ಯಾ.ಎ.ಜೆ.ಸದಾಶಿವ ಹಾಗೂ ಕಾಂತರಾಜು ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಬಿಎಸ್‌ಪಿ ಜಿಲ್ಲಾ ಸಂಯೋಜಕ ಎಚ್.ಎನ್.ಶಿವಮೂರ್ತಿ ಮಾತನಾಡಿ, ಈ ವರದಿಗಳ ಜಾರಿಗಾಗಿ ಅನೇಕ ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದರೂ ಈವರೆಗೂ ಅಧಿಕಾರ ನಡೆಸಿದ ಯಾವ ಸರ್ಕಾರವೂ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಹಿಂದುಳಿದ ವರ್ಗಗಳ ಬದುಕು ಇಂದಿಗೂ ಅತಂತ್ರವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ದೊಡ್ಡಬೀರನಹಳ್ಳಿ ಗ್ರಾಮದಲ್ಲಿ ದೌರ್ಜನ್ಯಕ್ಕೆ ಒಳಪಟ್ಟ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸಬೇಕು. ಇದೇ ರೀತಿ ಸಮಸ್ಯೆ ಎದುರಿಸಿದ ಕೋನಿಗರಹಳ್ಳಿಯಲ್ಲಿ ಕೊಳವೆಬಾವಿ ಕೊರೆಸಬೇಕು. ಹೊಟ್ಟೆಪ್ಪನಹಳ್ಳಿ, ಬೂದಿಹಳ್ಳಿ, ಚೌಳೂರು, ತೊರೆಬೀರನಹಳ್ಳಿ ಗ್ರಾಮಗಳಲ್ಲೂ ನೊಂದವರಿಗೆ ನೇರ ಸಾಲ ಸೌಲಭ್ಯ ಸಿಗಬೇಕು. ಆಯೋಗದ ವರದಿಗಳ ಅನುಷ್ಠಾನಕ್ಕೂ ಕ್ರಮವಹಿಸಬೇಕು ಎಂದು ಸರ್ಕಾರವನ್ನು ಕೋರಿದರು.
ಅಧ್ಯಕ್ಷ ಎನ್.ಪ್ರಕಾಶ್, ಮುಖಂಡರಾದ ಕೆ.ಎನ್.ದೊಡ್ಡೆಟ್ಟಪ್ಪ, ಹನುಮಂತರಾಯ, ರಾಮಸ್ವಾಮಿ, ಎಚ್.ಆರ್.ಶ್ರೀನಿವಾಸ್, ಜಗದೀಶ್, ಚೌಡಪ್ಪ, ನರಸಿಂಹಮೂರ್ತಿ ಇತರರಿದ್ದರು.