ಸದಾಶಿವ ಆಯೋಗದ ವರದಿ ವಿರೋಧಿಸಿ ಬೆಳಗಾವಿ ಚಲೋ

pammar
Published on

ಹುಬ್ಬಳ್ಳಿ: ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸಿ ಕೊರಮ, ಕೊರಚ, ಭೋವಿ (ವಡ್ಡರ), ಬಂಜಾರಾ (ಲಂಬಾಣಿ) ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿ ಡಿ. 22ರಂದು ‘ಬೆಳಗಾವಿ ಚಲೋ’ ಪ್ರತಿಭಟನೆಗೆ ಕರೆ ನೀಡಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸಮಿತಿ ಮುಖಂಡ ಪಾಂಡುರಂಗ ಪಮ್ಮಾರ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಪರಿಶಿಷ್ಟ ಜಾತಿಯ ಒಳಪಂಗಡಗಳ ಸುಮಾರು 1 ಲಕ್ಷ ಜನರು ಬೆಳಗಾವಿಯಲ್ಲಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಯಲ್ಲಿ 101 ಜಾತಿಯ ಸಮುದಾಯಗಳಿವೆ. ಸದಾಶಿವ ಆಯೋಗದ ವರದಿ ಜಾರಿಯಿಂದ 99 ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಈ ಆಯೋಗದ ವರದಿ ಜಾರಿಗೊಳಿಸುವ ಮುಂಚೆ ಒಳ ಪಂಗಡಗಳ ಮುಖಂಡರೊಂದಿಗೆ ರ್ಚಚಿಸಬೇಕಿತ್ತು. ಆದರೆ, ಸರ್ಕಾರ ಯಾವುದೇ ರೀತಿಯ ಚರ್ಚೆ ಮಾಡದೇ, ವರದಿ ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದರು.

ವರದಿ ಜಾರಿಗೊಳಿಸದಂತೆ ಹೈ ಕೋರ್ಟ್ ತಡೆಯಾಜ್ಞೆ ಇದೆ. ಹೀಗಾಗಿ, ಸರ್ಕಾರ ವರದಿ ಜಾರಿಗೆ ಯಾವುದೇ ಕ್ರಮ ಕೈಗೊಳ್ಳಬಾರದು. ಈ ವರದಿ ಅವೈಜ್ಞಾನಿಕವಾಗಿದ್ದು, ಕೂಡಲೇ ಇದನ್ನು ತಿರಸ್ಕರಿಸಬೇಕು. ಸಮಾಜದಲ್ಲಿ ಸಾಮರಸ್ಯ ಕದಡುವ ಇಂತಹ ಆಯೋಗಗಳನ್ನು ರಚಿಸಬಾರದು. ಯಾವುದೆ ಪರಿಶಿಷ್ಟ ಜಾತಿಯ ಜನಾಂಗಕ್ಕೆ ಒಳ ಮೀಸಲಾತಿ ನಿಗದಿಪಡಿಸದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಭೋವಿ ವಡ್ಡರ ಸಮಾಜದ ಜಗದ್ಗುರುಗಳು ಸೇರಿ ವಿವಿಧ ಸ್ವಾಮೀಜಿಗಳು, ಮುಖಂಡರು ಬೆಳಗಾವಿ ರ್ಯಾಲಿಯಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಪಾಲಿಕೆ ಮಾಜಿ ಸದಸ್ಯ ಯಮನೂರ ಗುಡಿಹಾಳ, ಶಿವಾನಂದ ಕೊಣ್ಣೂರ ಹಾಗೂ ಶಶಿಕಾಂತ ಬಿಜವಾಡ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net