

ವಿಜಯವಾಣಿ ಸುದ್ದಿಜಾಲ ಹಾಸನ
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನೂರಾರು ವರ್ಷಗಳಿಂದ ಶೋಷಣೆ, ದಬ್ಬಾಳಿಕೆಯನ್ನೇ ಅನುಭವಿಸಿದ ದಲಿತ ಕುಟುಂಬಗಳು ಪ್ರಸ್ತುತ ದಿನಗಳಲ್ಲಾದರೂ ವ್ಯವಸ್ಥಿತ ಬದುಕು ನಡೆಸುವಂತಾಗಬೇಕು. ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಪ್ರಾಧಾನ್ಯತೆ ದೊರೆಯಬೇಕು. ಅದಕ್ಕಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಉಗ್ರ ಹೋರಾಟ ನಡೆಸಲಾಗುತ್ತಿದೆ ಎಂದರು.
2020ರ ಆ.27ರಂದು ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಪೀಠವು ಐತಿಹಾಸಿಕ ತೀರ್ಪು ನೀಡಿತು. ಅದರ ಪ್ರಕಾರ ರಾಜ್ಯದ ಶಾಸಕ ಸಭೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಳಮೀಸಲಾತಿ ವರ್ಗೀಕರಣ ಮಾಡುವ ಅಧಿಕಾರವಿದೆ. ಈ ತೀರ್ಪಿನಿಂದ ರಾಜ್ಯ ಸರ್ಕಾರಕ್ಕೆ ಇದ್ದ ಅಡತಡೆಗಳು ಮುಕ್ತವಾಗಿವೆ. ಆದ್ದರಿಂದ ಸಿಎಂ ಯಡಿಯೂರಪ್ಪ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಮಂಡಿಸಿ ಒಳ ಮೀಸಲಾತಿ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗೋವಿಂದರಾಜು ದಿಂಡಗೂರು, ಮಂಜುನಾಥ ಕುರುವಂಕ, ತಾಲೂಕು ಸಂಚಾಲಕ ಕೆ.ಟಿ. ಲಕ್ಷ್ಮಯ್ಯ, ರಮೇಶ್ ಉಳ್ಳಾವಳ್ಳಿ, ಕೇಶವಮೂರ್ತಿ ಕಬ್ಬಳ್ಳಿ, ರವಿಕುಮಾರ್, ಸಿ.ಎನ್. ಮಂಜುನಾಥ್, ಮಧು ಹಿರಿಸಾವೆ ಇದ್ದರು.
ವೈದ್ಯಾಧಿಕಾರಿ ವಿರುದ್ಧ ಆಕ್ರೋಶ:
ಬೇಲೂರು ತಾಲೂಕು ಅಡಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಜೀವ್ ಬಂಗಾರಿ ಕರ್ತವ್ಯ ಪ್ರಜ್ಞೆ ಮರೆತಂತೆ ವರ್ತಿಸುತ್ತಿದ್ದು ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಜಾಶಕ್ತಿ ಸಂಘಟನೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಚಿಕಿತ್ಸೆಗೆ ಬರುವ ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಜತೆಗೆ ಅನುಚಿತವಾಗಿ ವರ್ತಿಸುತ್ತಾರೆ. ಸರ್ಕಾರಿ ಸೇವಕ ಎಂಬ ಅರಿವಿಲ್ಲದೆ ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಈ ವೈದ್ಯರಿಂದ ಗ್ರಾಮೀಣ ಜನರಿಗೆ ಭಾರಿ ತೊಂದರೆಯಾಗುತ್ತಿದೆ ಎಂದರು.
ಸಮಿತಿಯ ಜಿಲ್ಲಾಧ್ಯಕ್ಷ ಪ್ರವೀಣ್ ಗೌಡ, ಉಪಾಧ್ಯಕ್ಷ ಯುವರಾಜ್ ಹಾಗೂ ಇತರರಿದ್ದರು.
ಸ್ಮಶಾನ ಸ್ಥಳಾಂತರಕ್ಕೆ ಆಗ್ರಹ:
ನಗರದ ಕೆಎಚ್‌ಬಿ ಬಡಾವಣೆ ಸಮೀಪದ ಸ್ಮಶಾನದಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು ಅದನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಬಡಾವಣೆಯ ಶ್ರೀಬಲಮುರಿ ಗಣಪತಿ ಸೇವಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕರೊನಾ ಕಾಯಿಲೆಯಿಂದ ಮೃತರಾಗುವ ಶವಗಳ ಅಂತ್ಯಕ್ರಿಯೆ ಇಲ್ಲಿ ನೆರವೇರಿಸಲಾಗುತ್ತಿದೆ. ಇದರಿಂದ ವ್ಯಾಪ್ತಿಯಲ್ಲಿ ದುರ್ವಾಸನೆ ಹರಡುತ್ತಿದ್ದು ಯಾವ ಯಾವುದೋ ಹೊತ್ತಿನಲ್ಲಿ ವಾಹನಗಳ ಓಡಾಟದಿಂದ ತೊಂದರೆಯಾಗುತ್ತಿದೆ. ಮಕ್ಕಳು, ಮಹಿಳೆಯರು ಭಯದಲ್ಲೇ ಉಸಿರಾಡುವಂತಾಗಿದೆ. ಆದ್ದರಿಂದ ಸ್ಮಶಾನವನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್, ನಿವಾಸಿಗಳಾದ ಪರಮೇಶ್, ನಾಗೇಶ್, ಹೇಮಂತ್, ರವಿ, ಆನಂದ್, ಜಯರಾಜು ಹಾಗೂ ಇತರರಿದ್ದರು.