ಸದಾಶಿವ ಆಯೋಗ ವರದಿ ಜಾರಿ ಬೇಡ

Sardar Sevalal Maharaj
Published on

ಕಲಬುರಗಿ: ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಒಡೆದು ಆಳುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ತರುತ್ತೇನೆ ಎನ್ನುವುದು ಸರಿಯಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯನ್ನೇ ನಡೆಸಬಾರದು ಎಂದು ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಮಹಾರಾಜರು ಆಗ್ರಹಿಸಿದರು.

ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಈಗಾಗಲೇ ಮೀಸಲಾತಿ ವಿಷಯಕ್ಕೆ ಕೈ ಹಾಕಿ ಪಾಠ ಕಲಿತಿದೆ. ಇದೀಗ ಸಚಿವ ಕೆ.ಎಚ್.ಮುನಿಯಪ್ಪ ಅವರು ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ ಎನ್ನುತ್ತಿರುವುದರಿಂದ ೯೯ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸದಾಶಿವ ಆಯೋಗದ ವರದಿಯಿಂದ ಬಂಜಾರ, ಭೋವಿ, ಕೊರಚ, ಕೊರಮ, ಸಿಳ್ಳೆಕ್ಯಾತ, ಹಂದಿ ಜೋಗಿ, ಸುಡುಗಾಡು ಸಿದ್ಧ, ಅಲೆಮಾರಿ, ಅರೆ ಅಲೆಮಾರಿ ಸೇರಿ ವಿವಿಧ ಸಮುದಾಯಗಳಿಗೆ ಮರಣ ಶಾಸನ ಬರೆದಂತೆ ಆಗಲಿದೆ. ತಮ್ಮ ಸ್ವಾರ್ಥಕ್ಕಾಗಿ ಹೇಳಿಕೆ ನೀಡುವುದು ಬಿಡಬೇಕು, ನಮಗೆ ದಲಿತ ಸಿಎಂ ಮಾಡುವ ಕನಸಿದೆ. ಹೀಗೆ ದಲಿತರನ್ನು ಒಡೆದು ಆಳಬಾರದು. ಇದನ್ನೇ ಮುಂದುವರಿಸಿದರೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಾರಂಭಿಕವಾಗಿ ರಾಜ್ಯದ ಎಲ್ಲ ೨೨೪ ಶಾಸಕರಿಗೆ ಮೀಸಲಾತಿ ಸಂರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಲಾಗುವುದು, ಒಪ್ಪದಿದ್ದರೆ ಮುಖ್ಯಮಂತ್ರಿ ಮನೆ ಎದುರು ಧರಣಿ, ಬೆಳಗಾವಿ ಚಲೋ, ವಿಧಾನ ಸೌಧ ಮುತ್ತಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನ್ನಿರಾಮ ರಾಠೋಡ್, ತಿಪ್ಪಣ್ಣ ಒಡೆಯರಾಜ, ಶಾಮರಾವ ಪವಾರ, ಚಂದು ಜಾಧವ್, ಶ್ರೀಹರಿ ಜಾಧವ್, ಭೀಮಾಶಂಕರ ಭಂಕೂರ, ವಿನೋದ ಚವ್ಹಾಣ್, ಶ್ರೀಧರ ಚವ್ಹಾಣ್, ಶ್ರೀಹರಿ ಜಾಧವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net