ಸದಾನಂದರಾಜೇ ಅರಸ್ ಜಯಂತ್ಯುತ್ಸವ

8kglphoto-1.,,
Published on

ಕೊಳ್ಳೇಗಾಲ: ತಾಲೂಕಿನ ಶ್ರೀ ಕ್ಷೇತ್ರ ಕುರುಬನಕಟ್ಟೆ ಮಠದ ಸಂಸ್ಥಾಪಕ ದಿ.ಸದಾನಂದರಾಜೇ ಅರಸ್ ಅವರ 71ನೇ ಜಯಂತಿ ಮಹೋತ್ಸವವನ್ನು ಶ್ರೀ ಮಠದಲ್ಲಿ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಶ್ರೀಗಳ ಜಯಂತಿ ಮಹೋತ್ಸವದ ಪ್ರಯುಕ್ತ ವಿಶೇಷ ಪೂಜೆಗಳು ನೆರವೇರಿದವು. ಶ್ರೀ ಮಠದ ಹಾಲಿ ಧರ್ಮಾಧಿಕಾರಿ ಶ್ರೀ ವರುಣ ಲಿಂಗರಾಜೇ ಅರಸ್ ಸಾನ್ನಿಧ್ಯದಲ್ಲಿ ಮುಂಜಾನೆಯಿಂದಲೇ ಆದಿಗುರು ಶ್ರೀ ಮಂಟೇಸ್ವಾಮಿ ಶಿಷ್ಯಂದಿರಾದ ಶ್ರೀ ಜ್ಯೋತಿಲಿಂಗಯ್ಯ ಚೆನ್ನಯ್ಯ ಅವರ ಗದ್ದುಗೆ ಹಾಗೂ ಕಂಡಾಯಗಳನ್ನು ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳೊಡನೆ ಪೂಜೆ ನೆರವೇರಿಸಲಾಯಿತು.

ಮಠದ ಆವರಣದಲ್ಲಿರುವ ಶ್ರೀಗಳ ಗದ್ದುಗೆ ಹಾಗೂ ಧ್ಯಾನ ಮಂಟಪಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀ ವರುಣ ಲಿಂಗರಾಜೇ ಅರಸ್ ಅವರು ತಮ್ಮ ತಂದೆ ದಿ. ಸದಾನಂದಾರಾಜೇ ಅರಸ್ ಶ್ರೀಗಳ ಗದ್ದುಗೆಗೆ ಪೂಜೆ ನೆರವೇರಿಸಿದರು.

ಮಹಾಮಂಗಳಾರತಿಯ ನಂತರ ಮಂಟೇಸ್ವಾಮಿ ಸುಪ್ರಭಾತವನ್ನೊಳಗೊಂಡ ವಚನಗಳ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು. ನಂತರ ಭಕ್ತರಿಗೆ ಲಾಡು ಪ್ರಸಾದದ ಜತೆಗೆ ಕಿರುಹೊತ್ತಗೆಯನ್ನು ನೀಡಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಶ್ರೀಸ್ವಾಮಿಯ ದರ್ಶನ ಪಡೆದರು. ಭಕ್ತರಿಗೆ ಬೆಳಗ್ಗೆಯಿಂದಲೇ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ರಾಜ ಬೊಪ್ಪೆಗೌಡನಪುರದ ಶ್ರೀ ಮಂಟೇಸ್ವಾಮಿ ಸಂಸ್ಥಾನ ಮಠದ ಶ್ರೀಗಳ ಪತ್ನಿ ಸನ್ನತಿ, ಚೇತನ್ ರಾಜೇ ಅರಸ್, ಭರತ್ ರಾಜೇ ಅರಸ್, ಸದ್ವೀರ ರಾಜೇ ಅರಸ್, ತಾ.ಪಂ. ಮಾಜಿ ಸದಸ್ಯ ಪುಟ್ಟಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net