ಸದಾಚಾರ, ಶಿವಾಚಾರದಿಂದ ಸಮಾಜ ಎಚ್ಚರಿಸುತ್ತಿದ್ದಾರೆ

B Y Vijayendra
Published on

ಚಿತ್ರದುರ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸದಾಚಾರ, ಶಿವಾಚಾರಗಳಿಂದ ಸದಾ ಸಮಾಜವನ್ನು ಎಚ್ಚರಿಸುತ್ತಿರುವ ಪೂಜ್ಯರು ಯಾರಾದರೂ ಭೂಮಿಯಲ್ಲಿ ಇದ್ದರೆ ಸಿರಿಗೆರೆ ಶ್ರೀ ಎಂದರು.

ಸಿರಿಗೆರೆಯಲ್ಲಿ ಶುಕ್ರವಾರ ತರಳಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮರುಳಸಿದ್ಧರು 12ನೇ ಶತಮಾನದಲ್ಲೇ ಅಜ್ಞಾನ, ಅನಾಚಾರಗಳ ವಿರುದ್ಧ ಜಾಗೃತಿ ಮೂಡಿಸಿ ನಾಡಿಗೆ ಬೆಳಕಾದವರು. ಅಪರೂಪದಲ್ಲೇ ಅಪರೂಪವೆಂಬಂತೆ ಧರ್ಮ ಮಾರ್ಗದೊಂದಿಗೆ ಅನ್ನ, ಅಕ್ಷರ ದಾಸೋಹವನ್ನು ನೀಡುತ್ತಾ ಬಂದಿರುವ ಕೀರ್ತಿ ಈ ಪೀಠಕ್ಕೆ ಸಲ್ಲುತ್ತದೆ. 200 ವಿದ್ಯಾಸಂಸ್ಥೆಗಳ ಮೂಲಕ 40 ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶವನ್ನು ಶ್ರೀಮಠ ಒದಗಿಸುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಡಿನ ಅನೇಕ ಮಠ ಮಾನ್ಯಗಳು, ಮಠಾಧೀಶರು, ಹರಗುರು ಚರಮೂರ್ತಿಗಳು, ಅಕ್ಷರ-ಅನ್ನ ದಾಸೋಹ ಸೇವೆ ಒದಗಿಸುತ್ತಿವೆ. ಈ ಸೇವೆಯನ್ನು ಕರ್ನಾಟಕದಲ್ಲಿ ಹೊರತುಪಡಿಸಿ ಭಾರತದ ಯಾವ ಮೂಲೆಯಲ್ಲೂ ನೋಡಲು ಸಾಧ್ಯವಿಲ್ಲ. ಆಧುನಿಕ ಭಗೀರಥ ಎಂದೇ ಕೀರ್ತಿಗೆ ಭಾಜನರಾಗಿರುವ ಡಾ.ಗುರುಗಳು ತಮ್ಮ ಬರಹಗಳ ಮೂಲಕ ಸಮಾಜವನ್ನು ತಿದ್ದುತ್ತಾ ಬಂದಿದ್ದಾರೆ ಎಂದು ಬಣ್ಣಿಸಿದರು.

ಚಂದ್ರಯಾನ-3ರ ಮುನ್ನ ತಿರುಪತಿ ದರ್ಶನ ಪಡೆದ ಇಸ್ರೋ ವಿಜ್ಞಾನಿಗಳ ನಡೆಗೆ ಟೀಕೆಗಳು ಎದುರಾದಾಗ ದಿಟ್ಟತನ ಸ್ಪಷ್ಟತೆಯನ್ನು ಶ್ರೀಗಳು ಕೊಟ್ಟಿದ್ದಾರೆ. ಯಾವುದೇ ಉತ್ತಮ ಕೆಲಸಕ್ಕೆ ಮನುಷ್ಯ ಪ್ರಯತ್ನದೊಂದಿಗೆ ದೇವರ ಆರ್ಶೀವಾದವೂ ಮುಖ್ಯ. ಭೀಕರ ಬರಗಾಲದ ವೇಳೆ ಚಿತ್ರದುರ್ಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆದೇಶಿಸಿದ್ದರು. 850 ಕೋಟಿ ರೂ.ಗಳ ಅನುದಾನವನ್ನೂ ಮಂಜೂರು ಮಾಡಿದ್ದರೆಂದು ನೆನಪಿಸಿಕೊಂಡರು.

ದೇಶದ ಒಂದು ಕಣ್ಣು ಯೋಧನಾದರೆ, ಮತ್ತೊಂದು ಕಣ್ಣು ರೈತ. ಇವತ್ತು ಕೃಷಿಕರು ಸಂಕಷ್ಟದಲ್ಲಿದ್ದಾರೆ. ಬೆಳೆಗೆ ನ್ಯಾಯಯುತ ಬೆಲೆ ಇಲ್ಲ, ಮಳೆ ಇಲ್ಲದೆ ಬೆಳೆ ನಾಶವಾಗುತ್ತಿದ್ದು, ಇವತ್ತಿನ ಯುವ ಪೀಳಿಗೆಗೆ ರೈತರ ಸಂಕಷ್ಟದ ಕುರಿತು ಅರಿವು ಮೂಡಿಸಬೇಕಿದೆ. ಸ್ವಾಭಿಮಾನಿ ಕೃಷಿಕರಾಗಿ ಬದುಕುವ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.

ಯಾವ ಸರ್ಕಾರದಿಂದಲೂ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಾಗದು. ಆಧುನಿಕ ಕಾಲದ ಭರಾಟೆಯಲ್ಲಿ ಪಾಲಕರನ್ನು ಯುವಸಮೂಹ ಮರೆಯುತ್ತಿದೆ. ತಂದೆ-ತಾಯಿಗೆ ಯುವಜನರು ಭಾರವಾಗಬಾರದು. ರಾಜ್ಯದೆಲ್ಲೆಡೆ ಹೋದರು ಯಡಿಯೂರಪ್ಪರ ಮಗ ಎಂದು ನನ್ನನ್ನು ಜನರು ಗುರುತಿಸುತ್ತಿದ್ದಾರೆ. ನಾನು ಸರಿದಾರಿಯಲ್ಲಿ ಸಾಗುವ ಶಕ್ತಿಯನ್ನು ಪೂಜ್ಯರು, ಜನರು ನೀಡಬೇಕಿದೆ ಎಂದು ಮನವಿ ಮಾಡಿದರು.

ಕುವೆಂಪು ಮತ್ತು ವಿಶ್ವಮಾನವ ಕುರಿತು ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ, ಗುರು ಮಹಿಮೆ ಕುರಿತು ಹಿರೇಮಗಳೂರು ಕಣ್ಣನ್ ಉಪನ್ಯಾಸ ನೀಡಿದರು. ಇದೇ ವೇಳೆ ಪ್ಯಾರಿಸ್‌ನ ಪ್ರೊ.ಪಿಯರ್ ಸಿಲ್ವನ್ ಫಿಲಿಯೋಜಾ, ವಸುಂಧರಾ ಫಿಲಿಯೋಜಾ, ಇಸ್ರೇಲ್‌ನ ಪ್ರೊ.ಗಿಲ್‌ಬೆನ್‌ಹೆರುಟ್, ವೀರ ಹುತಾತ್ಮ ಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ಪಾಲಕರಾದ ಎಂ.ವೆಂಕಟೇಶ್ ಮತ್ತು ಕೆ.ಪಿ.ಅನುರಾಧ ಅವರನ್ನು ಸನ್ಮಾನಿಸಲಾಯಿತು.

ಸಿರಿಗೆರೆ ಶ್ರೀಮದ್‌ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಎಂಎಲ್ಸಿ ಕೆ.ಎಸ್.ನವೀನ್, ಶಾಸಕರಾದ ಡಾ.ಎಂ.ಚಂದ್ರಪ್ಪ, ಡಿ.ಜಿ.ಶಾಂತನಗೌಡ, ಬಿ.ಪಿ.ಹರೀಶ್, ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್, ಶಿವಕುಮಾರ್, ಶಿವ ಗಂಗಾ ಶ್ರೀನಿವಾಸ್, ಡಾ.ಟಿ.ಜಿ.ರವಿಕುಮಾರ್, ನೀರಾವರಿ ಇಲಾಖೆ ನಿವೃತ್ತ ಇಂಜಿನಿಯರ್ ಮಲ್ಲಿಕಾರ್ಜುನ ಬಿ.ಗುಂಗೆ ಇತರರಿದ್ದರು. ಸಿರಿಗೆರೆ ಅಕ್ಕನಬಳಗದ ಸದಸ್ಯರು ಹಾಗೂ ತೋಟಪ್ಪ ಉತ್ತಂಗಿ ವಚನ ಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net