ಸದಸ್ಯರ ಮಾತಿಗೆ ಬೆಲೆ ಇಲ್ಲ

Published on

ಅರಕಲಗೂಡು: ಅರಕಲಗೂಡು ಪಟ್ಟಣ ಪಂಚಾಯಿತಿ ಸದಸ್ಯರ ಮಾತಿಗೆ ಯಾವುದೇ ಬೆಲೆ ಇಲ್ಲವಾಗಿದೆ. ಕೇವಲ ಸಭೆಗೆ ಬಂದು ಕುಳಿತು ಹೋಗುವುದಷ್ಟೇ ನಮ್ಮ ಕೆಲಸವಾಗಿದೆ. ಈ ಕುರಿತು ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಪಟ್ಟಣದ ಎರಡನೇ ವಾರ್ಡ್ ಸದಸ್ಯೆ ಸುಮಿತ್ರಾ ಗುರುವಾರ ನಡೆದ ಪಟ್ಟಣ ಪಂಚಾಯಿತಿ ವಿಶೇಷ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯೆ ಸುಮಿತ್ರಾ ಮಾತನಾಡಿ, ತಮ್ಮ ವಾರ್ಡ್‌ನಲ್ಲಿ ಹಾಲಿನ ಬೂತ್ ತೆರೆಯಲು ನೆಲ ಬಾಡಿಗೆ ನೀಡಲಾಗಿದೆ. ಆದರೆ ನೆಲಬಾಡಿಗೆ ನೀಡದಂತೆ ಈ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ನಿಯಮ ಮೀರಿ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಇದನ್ನು ತೆರವುಗೊಳಿಸುವಂತೆ ಮನವಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಹಿಂದಿನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ತೆರವುಗೊಳಿಸುವ ಭರವಸೆ ನೀಡಲಾಗಿತ್ತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಉಪಾಧ್ಯಕ್ಷೆ ಎಚ್.ಎಸ್.ರಶ್ಮಿ ಮಂಜು, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಇದಕ್ಕೆ ಧ್ವನಿಗೂಡಿಸಿ, ತಮ್ಮ ಅಸಮಾಧಾನ ಹೊರಹಾಕಿ ಕ್ರಮಕ್ಕೆ ಒತ್ತಾಯಿಸಿದರು. ಸದಸ್ಯ ಪ್ರದೀಪ್ ಕುಮಾರ್ ಮಾತನಾಡಿ, ನ್ಯಾಯಾಲಯದ ತಡೆಯಾಜ್ಞೆ ಇದ್ದರೆ ನಮ್ಮ ವಕೀಲರನ್ನು ಕರೆಸಿ ತೆರವುಗೊಳಿಸಲು ಕ್ರಮ ಕೈಗೊಳ್ಳವಂತೆ ಆಗ್ರಹಿಸಿದರು.
ಶೌಚಗೃಹ ನಿರ್ಮಿಸಿಕೊಳ್ಳಲು ಕೆಲವು ಬಡಕುಟುಂಬಗಳು ಅರ್ಜಿ ಸಲ್ಲಿಸಿವೆ. ಆದರೆ ಸರ್ಕಾರ ನೀಡಿದ್ದ ಅನುದಾನವನ್ನು ವಾಪಸ್ ಪಡೆದಿದೆ. ಪಪಂ ನಿಧಿಯಿಂದ ಶೌಚಗೃಹ ನಿರ್ಮಿಸಿಕೊಳ್ಳಲು ಅನುದಾನ ನೀಡುವಂತೆ ಕೃಷ್ಣಯ್ಯ ಒತ್ತಾಯಿಸಿದರು.

ಕಸ ಸಂಗ್ರಹಣೆ ನಡೆಸಿ ಸಾಗಣೆ ಮಾಡುವ ಕಾರ್ಯಕ್ಕೆ ಮಹಿಳಾ ಸಂಘಕ್ಕೆ ಎರಡು ವರ್ಷಗಳಿಗೆ ಟೆಂಡರ್ ಅನುಮೊದನೆ ಮಾಡಿರುವ ಕುರಿತು ಸದಸ್ಯ ಪ್ರದೀಪ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ನಿಯಮದಂತೆ ಒಂದು ವರ್ಷಕ್ಕೆ ಅನುಮೋದನೆ ನೀಡಬೇಕು. ಅವರ ಕಾರ್ಯ ತೃಪ್ತಿಕರವಾಗಿದ್ದರೆ ಮುಂದಿನ ಬಾರಿಯೂ ಅವರನ್ನೇ ಮುಂದುವರಿಸಿ.ಇದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ನಿಯಮ ಉಲ್ಲಂಘನೆಯಾಗಬಾರದು ಎಂದು ಅಗ್ರಹಿಸಿದರು.

ಹಳೇ ನೀರಿನ ಟ್ಯಾಂಕ್ ಅನ್ನು ಏಕಾಏಕಿ ಒಡೆದ ಪರಿಣಾಮ ಕುಡಿಯುವ ನೀರು ಪೂರೈಸುವ ಕೊಳವೆಗಳು ಒಡೆದು ಜನರು ನೀರಿಲ್ಲದೆ ಪರದಾಡುವಂತಾಯಿತು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ ವೆಚ್ಚವನ್ನು ಟ್ಯಾಂಕ್ ಒಡೆದ ಗುತ್ತಿಗೆದಾರನಿಂದ ವಸೂಲಿ ಮಾಡುವಂತೆ ಆಗ್ರಹಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಗೊರೂರು ನೀರು ಸರಬರಾಜು ಕೇಂದ್ರದ ಬಳಿ ಇದ್ದ ಟ್ಯಾಂಕ್ ಅನ್ನು ಏಕಾಏಕಿ ಒಡೆಯಲಾಗಿದೆ. ಈ ಕುರಿತು ಪೊಲೀಸರಿಗೂ ದೂರು ನೀಡಿಲ್ಲ. ಈ ಕುರಿತು ಕ್ರಮ ಜರುಗಿಸಬೇಕು ಎಂದು ಸದಸ್ಯ ಹೂವಣ್ಣ ಆಗ್ರಹಿಸಿದರು.

ಪಪಂ ವಿವಿಧ ಬಾಬ್ತುಗಳ ಹರಾಜಿನ ಅಂತಿಮ ಬಿಡ್‌ದಾರರ ಟೆಂಡರ್ ಅನುಮೋದನೆಗೆ ಸಭೆ ಒಪ್ಪಿಗೆ ನೀಡಿತು. ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net