ಸದನದಲ್ಲಿ ಸಮಸ್ಯೆಗಳ ಚರ್ಚೆಗೆ ತಿಪ್ಪಾರೆಡ್ಡಿ ಒತ್ತಾಯ

CTD STRIKE-X MLA.....
Published on

ಚಿತ್ರದುರ್ಗ:ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಅಧಿಕಾರಿ, ಸಿಬ್ಬಂದಿ ಸಮಸ್ಯೆಗಳ ಬಗ್ಗೆ ಸದನದಲ್ಲಿ ಸುದೀರ್ಘ ಚರ್ಚೆಯಾಗಬೇಕು. ಆಗ ಸರ್ಕಾರಕ್ಕೆ ಮನವರಿಕೆ ಆಗಲಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಪಂ ಬಳಿ ಅನಿರ್ದಿಷ್ಟಾವಧಿ ಧರಣಿನಿರತ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಅಧಿ ಕಾರಿ, ಸಿಬ್ಬಂದಿ ಹಾಗೂ ಗ್ರಾಪಂ ಸದಸ್ಯರ ಒಕ್ಕೂಟದ ಜಿಲ್ಲಾ ಸಮಿತಿಯವರನ್ನು ಗುರುವಾರ ಭೇಟಿ ಮಾಡಿ ಮಾತನಾಡಿದರು.
ಸದನದಲ್ಲಿ ನಿಮ್ಮ ಬೇಡಿಕೆಗಳ ಕುರಿತು ಬಿಜೆಪಿ ಸದಸ್ಯರು ಚರ್ಚಿಸಬೇಕಿದೆ. ವಿಧಾನ ಪರಿಷತ್‌ನಲ್ಲಿರುವ 25 ಸದಸ್ಯರಿಗೆ ನಿಮ್ಮ ಸಮಸ್ಯೆಗಳ ಅರಿವಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಹಳ್ಳಿಗಳಲ್ಲಿ ತಿರುಗಾಡಿಲ್ಲ. ಹಾಗಾಗಿ ಅವರಿಗೆ ಪಿಡಿಒ, ಗ್ರಾಪಂ ನೌಕರರ ತೊಂದರೆಗಳು ಗೊತ್ತಿಲ್ಲ. ನಿಮ್ಮ ಹೋರಾಟದ ಜತೆ ನಾವಿದ್ದೇವೆ ಎಂದರು.
ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ದಿನವಿಡೀ ನಿಮ್ಮ ಸಮಸ್ಯೆಗಳ ಕುರಿತು ಚರ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಹೇಳಿದರು.
ಪಂ.ರಾಜ್ ಸಚಿವರು ಮತ್ತು ಕಾರ‌್ಯದರ್ಶಿಯವರೊಂದಿಗೆ ಆರ್‌ಡಿಪಿಆರ್ ಸದನ ಸಮಿತಿಯಲ್ಲಿ ಇಪ್ಪತ್ತು ಶಾಸಕರಿದ್ದೇವೆ. ಆದಾಯವಿಲ್ಲದೆ ಗ್ರಾಪಂಗಳನ್ನು ನಡೆಸುವುದು ಹೇಗೆ? ಗ್ರಾಪಂಗಳಿಗೆ ಒಂದು ಕೋಟಿ ರೂ.ಅನುದಾನ ಕೊಡಬೇಕೆಂದು ಸಲಹೆ ನೀಡಿದ್ದೇನೆ. ಸಮಸ್ಯೆಗಳ ಕುರಿತಂತೆ ಸಿಎಂ ಬಳಿಗೆ ನಿಯೋಗ ಹೋಗೋಣವೆಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ರಾಜ್ಯ ಪಿಡಿಒ ಸಂಘದ ಕಾರ‌್ಯಾಧ್ಯಕ್ಷ ಆರ್.ಪಾತಣ್ಣ, ಸಂತೋಷ್ ಮತ್ತಿತರರು ಇದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net