

ಚಳ್ಳಕೆರೆ: ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಆಧಾರವಾಗಿದ್ದು, ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಸಮುದಾಯ ಮತ್ತು ಸಂಘಟನೆಗಳ ಸಹಕಾರ ಅಗತ್ಯವಿದೆ ಎಂದು ಬಿಇಒ ಕೆ.ಎಸ್. ಸುರೇಶ್ ಹೇಳಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ಪ್ರತಿಭಾವಂತರನ್ನಾಗಿ ರೂಪಿಸುವ ಮೂಲಕ ಶಿಕ್ಷಕರು ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಪಠ್ಯ ಮತ್ತು ಸಮಾಜದ ನೈತಿಕ ಜವಾಬ್ದಾರಿಗಳ ಬಗ್ಗೆ ತಿಳಿಸಿದಾಗ ಮಾತ್ರ, ಉತ್ತಮ ಬದುಕು ರೂಪಿಸಿಕೊಳ್ಳಲು ಆಧಾರವಾಗುತ್ತಿದೆ. ಬೋಧನೆಯಲ್ಲಿ ಶಿಕ್ಷಕ ಸಂಪನ್ಮೂಲ ವ್ಯಕ್ತಿಯಾಗಿರಬೇಕು. ಪ್ರತಿ ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಶಿಕ್ಷಕನ ಪಾತ್ರ ಮಹತ್ವವಾಗಿ ಕಾಣಬೇಕು ಎಂದು ಹೇಳಿದರು.
ಪೊಲೀಸ್ ಉಪಅಧೀಕ್ಷಕ ಟಿ.ಬಿ. ರಾಜಣ್ಣ, ರೋಟರಿ ಕ್ಲಬ್ ಅಧ್ಯಕ್ಷ ಕೆ. ನಾಗೇಶ್, ಪದಾಧಿಕಾರಿಗಳಾದ ಡಾ.ಕೆ.ಎಂ. ಜಯಕುಮಾರ್, ಎಸ್. ಜಯಪ್ರಕಾಶ್, ಮುರುಗೇಶ್, ಸಂತೋಷ್‌ರೆಡ್ಡಿ, ಸಿದ್ದಾರ್ಥ, ಶಿಕ್ಷಕರಾದ ಬಿ.ಎಲ್. ಯಶೋಧಮ್ಮ, ಡಿ.ಎಸ್. ವಿಶ್ವನಾಥ್, ಶಂಷಾದ್ ಬೇಗಂ, ಎಂ. ನಾಗರತ್ನಾ, ಎಂ.ತ್ರಿವೇಣಿ, ಎಸ್. ಶೈಲಜಾ, ಎಸ್. ಜ್ಯೋತಿ, ರೂಪಾ, ಕೆ. ಲೀಲಾವತಿ, ಬಿ. ಶಹೀನಾ, ವೈ. ಕಾವ್ಯಾ ಇದ್ದರು.