ಸದೃಢ ಆರೋಗ್ಯವಂತರಾಗಿ ಬಾಳಲು ಸಲಹೆ

h24-DEVIKOPPA
Published on

ಕಲಘಟಗಿ: ನಮ್ಮ ಜೀವನ ಸಾಫಲ್ಯತೆ ಪಡೆಯಲು ದೇಹದ ಮೂಲಕ ಸಾಧನೆಯಾಗಬೇಕು. ಅದಕ್ಕೆ ಆರೋಗ್ಯ ಅನಿವಾರ್ಯ. ಆರೋಗ್ಯವೆನ್ನುವ ಭಾಗ್ಯವಿದ್ದಾಗ ಮಾತ್ರ ನಾವು ಭೂಮಿಯಲ್ಲಿ ಯಾಕಾಗಿ ಜನ್ಮ ತಳೆದಿದ್ದೇವೆಯೋ ಅದು ನೆರವೇರಲು ಸಾಧ್ಯ. ಹಾಗಾಗಿ ‘ಆರೋಗ್ಯವೇ ಭಾಗ್ಯ’ ಎಂದರಿತು ಆರೋಗ್ಯ ವರ್ಧನೆಗೆ ಗಮನ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಅಭಿಪ್ರಾಯ ಪಟ್ಟರು.

ಕ್ಷಮತಾ ಸೇವಾ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಹುಬ್ಬಳ್ಳಿ ಶಾಖೆ ಆಶ್ರಯದಲ್ಲಿ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನ ಹತ್ತಿರದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯವೇ ಸಂಪತ್ತು ಎಂಬುದು ಬಹಳ ಸತ್ಯ. ಯಾವುದೇ ಕೆಟ್ಟ ಅಥವಾ ಒಳ್ಳೆಯ ಸಂದರ್ಭಗಳಲ್ಲಿ ನಮ್ಮೊಂದಿಗೆ ಉಳಿಯುವುದು ಉತ್ತಮ ಆರೋಗ್ಯ ಮಾತ್ರ. ನಮ್ಮ ಆರೋಗ್ಯ ಉತ್ತಮವಾಗಿದ್ದರೆ, ಜೀವನದಲ್ಲಿ ಯಾವುದೇ ಕೆಟ್ಟ ಸಂದರ್ಭಗಳನ್ನು ಎದುರಿಸಬಹುದು ಎಂದರು.

ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 20 ವರ್ಷಗಳಿಂದಲೂ ಕ್ಷಮತಾ ಸೇವಾ ಸಂಸ್ಥೆಯಿಂದ ಇಂತಹ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಾ ಬಂದಿದ್ದೇವೆ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ವಾಪಸ್ ನೀಡಿ ಸಮಾಜದ ಋಣ ತೀರಿಸುತ್ತಿದ್ದೇವೆ ಎಂದರು.

650 ಜನರ ಆರೋಗ್ಯ ತಪಾಸಣೆ, 40ಕ್ಕೂ ಹೆಚ್ಚು ಆಯುಷ್ಮಾನ್ ಭಾರತ ಕಾರ್ಡ್ ನೋಂದಣಿ ಮಾಡಲಾಯಿತು. 20 ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಗ್ರಾಪಂ ಅಧ್ಯಕ್ಷ ಮಂಜು ಕೆಲಗೇರಿ, ಉಪಾಧ್ಯಕ್ಷೆ ದೇವಕ್ಕ ಲಮಾಣಿ, ಎಸ್​ಡಿಎಂಸಿ ಅಧ್ಯಕ್ಷ ಗುರುಸಿದ್ದಪ್ಪ ಟೊಂಗಳಿ, ವಿಎಸ್​ಎಸ್ ಬ್ಯಾಂಕ್ ಅಧ್ಯಕ್ಷ ನಾರಾಯಣ ಸಂಗಮೇಶ್ವರ, ಬಸವಂತಪ್ಪ ದೂಳಿಕೊಪ್ಪ, ಶಂಕ್ರಪ್ಪ ಕೆಳಗೇರಿ, ಸಾದೇವಪ್ಪ ಕೆಳಗೇರಿ, ಸಂಗನಬಸಯ್ಯ ಸಂಬಾಳದ, ಮಹದೇವಪ್ಪ ಭೋವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net