ಸತ್ಸಂಗದಿಂದ ಸನ್ಮಾರ್ಗ

2902KLB08
Published on

ಕಲಬುರಗಿ: ಭಾರತದ ಪುಣ್ಯಭೂಮಿ. ಸಾಧು-ಸಂತರು, ಶರಣರು, ದಾಸರು, ಮಹಾಂತರು ಜನಿಸಿ ಸತ್ಸಂಗದ ಮೂಲಕ ಸನ್ಮಾರ್ಗ ತೋರಿದ್ದಾರೆ ಎಂದು ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ತತ್ವರೂಪಾನಂದಜಿ ಮಹಾರಾಜ ನುಡಿದರು.
ರಾಜಾಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಎರಡು ದಿನದ ಭಾವತರಂಗಿಣಿ ಭಕ್ತ ಸಮಾಗಮ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿದ ಸ್ವಾಮೀಜಿ, ಸತ್ಪುರುಷರ ಉದಾತ್ತ ವಿಚಾರಧಾರೆಗಳು ನಮಗೆ ಮಾರ್ಗದರ್ಶನ ನೀಡುತ್ತವೆ. ಶಂಕರಾಚಾರ್ಯರು, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ ಅವರಂಥ ಮಹಾನ್ ಚೇತನರು ಸತ್ಸಂಗದ ಮೂಲಕ ಜಗತ್ತಿಗೆ ಸನ್ಮಾರ್ಗ ತೋರಿಸಿಕೊಟ್ಟಿದ್ದಾರೆ ಎಂದರು.
ವ್ಯಾಸ ಮಹರ್ಷಿ ವೇದ ವಿಭಾಗ ಮಾಡಿದ್ದು, 18 ಪುರಾಣಗಳನ್ನು ರಚಿಸಿದ್ದಾರೆ. ಮಾನವರ ಬದುಕಿಗೆ ಪುರಾಣಗಳು ಉತ್ತಮ ಮಾರ್ಗದರ್ಶಿಗಳಾಗಿವೆ. ಪರೋಪಕಾರ ಬದುಕು ನಮ್ಮದಾಗಬೇಕು. ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಬದುಕು. ಮಕ್ಕಳು ಅತ್ತಾಗಲೇ ತಾಯಿ ಆಹಾರ ನೀಡುತ್ತಾಳೆ. ಅದರಂತೆ ನಾವು ಕೂಡ ಭಗವಂತ ಕಾರುಣ್ಯ ಪಡೆಯಲು ಕಷ್ಟ ಪಡಬೇಕು. ಮನಸ್ಸಿದ್ದಲ್ಲಿ ಮಾರ್ಗವಿದೆ. ನಾವು ಯಾವ ಕಾರ್ಯ ಮಾಡಿದರೂ ಮನಸಾಪೂರ್ವಕ ಮಾಡಬೇಕು. ಅಂದಾಗಲೇ ಸಾಧನೆ ಗುರಿ ತಲುಪಲು ಸಾಧ್ಯ ಎಂದು ಪ್ರತಿಪಾದಿಸಿದರು.
ವಿಜಯಪುರದ ಶ್ರೀ ಸ್ವಾಮಿ ನಿರ್ಭಯಾನಂದಜಿ ಮಹಾರಾಜ, ರಾಮೋಹಳ್ಳಿಯ ಶ್ರೀ ಸ್ವಾಮಿ ಯೋಗೇಶ್ವರಾನಂದಜಿ ಮಹಾರಾಜ, ಬೀದರ್ನ ಶ್ರೀ ಸ್ವಾಮಿ ಜ್ಯೋತಿರ್ಮಯಾನಂದಜಿ ಮಹಾರಾಜ, ಹರಿಹರದ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ, ಮಂಗಳೂರಿನ ಶ್ರೀ ಸ್ವಾಮಿ ಜಿತಕಾನಂದ ಮಹಾರಾಜ, ಶ್ರೀ ಸ್ವಾಮಿ ಮಹೇಶ್ವರಾನಂದ ಮಹಾರಾಜ, ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಬಸವರಾಜ ಗಾದಗೆ, ವಿಜಯವಾಣಿ ಸಹಾಯಕ ಸುದ್ದಿ ಸಂಪಾದಕ ರವೀಂದ್ರ ದೇಶಮುಖ, ವಾಗ್ಮಿ ಹಾರಿಕಾ ಮಂಜುನಾಥ ಇತರರಿದ್ದರು.
ಅನ್ನ ಚಿನ್ನ ಸಂಪಾದನೆಯೇ ಜೀವನವಲ್ಲ
ಅನ್ನ ಮತ್ತು ಚಿನ್ನ ಸಂಪಾದನೆಯೇ ಜೀವನದ ಪ್ರಮುಖ ಉದ್ದೇಶ ಅಂದುಕೊಂಡಿದ್ದೇವೆ. ಲೌಕಿಕ ಸಂಪಾದನೆಗಿಂತ ಭಗವಂತನ ಪ್ರೀತಿ ಸಂಪಾದಿಸುವುದೇ ಬದುಕಿನ ಮುಖ್ಯ ಉದ್ದೇಶ ಎಂಬ ಸತ್ಯವನ್ನು ಅರಿಯಬೇಕಿದೆ ಎಂದು ಹಿರಿಯ ಪತ್ರಕರ್ತ ರವೀಂದ್ರ ದೇಶಮುಖ ಹೇಳಿದರು. ಭಾವತರಂಗಿಣಿ ಕಾರ್ಯಕ್ರಮದಲ್ಲಿ ಅಧ್ಯಾತ್ಮದ ಪ್ರಖರ ಶಕ್ತಿ ಹಾಗೂ ನವದೃಷ್ಟಿಯಾಗಿ ಶ್ರೀ ರಾಮಕೃಷ್ಣ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಪರಮಾತ್ಮನಲ್ಲಿ ಭಕ್ತಿ ಮಾಡುವುದನ್ನು ಕಲಿಯಬೇಕಾದರೆ ಮೊದಲು ರಾಮಕೃಷ್ಣ ಪರಮಹಂಸರನ್ನು ತಿಳಿದುಕೊಳ್ಳಬೇಕು ಎಂದರು. ನಂತರ ಮಾತಾ ಮಹೋತ್ಸವ ವಿಷಯ ಬಗ್ಗೆ ವಾಗ್ಮಿ ಹಾರಿಕಾ ಮಂಜುನಾಥ ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net