ಸತ್ವವಿರುವ ಬಿತ್ತನೆ ಬೀಜ ಮಾರಾಟ ಮಾಡಿ

MAY 22-HRP-03
Published on

ಹರಪನಹಳ್ಳಿ: ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡಬೇಕು. ಸರ್ಕಾರ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚಿನ ತಗೆದುಕೊಳ್ಳಬಾರದು ಎಂದು ಮಾರಾಟಗಾರರಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಾಕೀತು ಮಾಡಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಗುರುವಾರ ಮಾತನಾಡಿದರು. ಸತ್ವ ಇರುವ ಬೀಜ ಕೊಡಿ. ಸತ್ತು ಹೋಗಿರುವ ಬೀಜಗಳನ್ನು ಕೊಡಬೇಡಿ. ಸಾವಯವ ಗೊಬ್ಬರ, ಬೇವಿನ ಹಿಂಡಿ ಹೀಗೆ ಹಳೇ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಾಗೃತದಳದ ಸಹಾಯಕ ಕೃಷಿ ನಿರ್ದೇಶಕ ಕುಮಾರಸ್ವಾಮಿ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ ಹಾಗೂ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಮಾರಾಟ ಮಾಡಬೇಕು. ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ಹಣ ರೈತರಿಂದ ಪಡೆದುಕೊಂಡರೆ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಕಡ್ಡಾಯವಾಗಿ ಜಿಎಸ್‌ಟಿ ಬಿಲ್ ಕೊಡಬೇಕು, ಅನಧಿಕೃತ ಬಿಲ್ ನೀಡಿದರೆ ರೈತರು ಅದನ್ನು ಪ್ರಶ್ನಿಸಿ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಬೇಕು, ಅನಧಿಕೃತ ಬೀಜ, ಗೊಬ್ಬರ ಮಾರಾಟ ಮಾಡಬಾರದು, ರೈತರಿಂದ ದೂರು ಬರಬಾರದು ಎಂದ ಅವರು ಒಟ್ಟಿನಲ್ಲಿ ಕಾನೂನು ಚೌಕಟ್ಟು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕೃಷಿಕ ಸಮಾಜದ ಜಿಲ್ಲಾದ್ಯಕ್ಷ ರೇವಣಸಿದ್ದಪ್ಪ ಮಾತನಾಡಿ. ಮಾರಾಟಗಾರರು, ಕೃಷಿ ಇಲಾಖೆ ರೈತರಿಗೆ ಸೇತುವೆ ಇದ್ದ ಹಾಗೆ, ಉತ್ತಮ ಕೀಟ ನಾಶಕ ಸಿಂಪಡಿಸಲು ಸಲಹೆ ನೀಡಿ, ಮೆಕ್ಕೆಜೋಳ ಬೆಳೆ ಮದ್ಯೆ ಅಕ್ಕಡಿ ಕಾಳು ಬೆಳೆಯಲು ಉತ್ತೇಜನ ಕೊಡಿ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಉಮೇಶ ಮಾತನಾಡಿ, ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಮಾಸಂತ್ಯದಲ್ಲಿ ಅಥವಾ ಜೂನ್ 01ರಿಂದ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಉಪಕರಣಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಕರಪತ್ರ ಹಾಗೂ ಖರೀದಿಯಾಗುವ ರಸಗೊಬ್ಬರ ನೋಂದಣಿ ಮಾಡುವ ಪಿಒಎಸ್ ಯಂತ್ರಗಳನ್ನು ಮಾರಾಟಗಾರರಿಗೆ ಶಾಸಕಿ ವಿತರಣೆ ಮಾಡಿದರು. ಕೃಷಿ ಪರಿಕರ ಮಾರಾಟಗಾರರ ಸಂಘಕ್ಕೆ ಪಟ್ಟಣದಲ್ಲಿ ನಿವೇಶನ ನೀಡುವಂತೆ ಸಂಘದ ಅಧ್ಯಕ್ಷ, ಸದಸ್ಯರು ಶಾಸಕರಲ್ಲಿ ಮನವಿ ಪತ್ರ ಸಲ್ಲಿಸಿದರು.

ಕೃಷಿ ಅಧಿಕಾರಿಗಳಾದ ಸಂಗಪ್ಪ,ನಾಗರಾಜ ಸಕ್ರೀಗೌಡ, ಪುರಸಭೆ ಸದಸ್ಯ ಲಾಟಿದಾದಾಪೀರ, ಪ್ರಮುಖರಾದ ಶಿವಲಿಂಗಯ್ಯ ಕಳಸದಮಠ್, ಹುಲ್ಲಿಕಟ್ಟಿ ಚಂದ್ರಪ್ಪ, ಬಿ.ಬಿ.ವಿಜೇಂದ್ರ ಬಾಗಳಿ, ಜಯಂತ, ಬೆಣ್ಣಿಹಳ್ಳಿ ಮಂಜುನಾಥ, ಹಳ್ಳಿಕೆರೆ ಕೊಟ್ರೇಶ್, ಶ್ರೀಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net