ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಲಿ

4Athanigrameen1
Published on

ಅಥಣಿ ಗ್ರಾಮೀಣ: ಡಿಜಿಟಲ್, ವೆಬ್ ಮೀಡಿಯಾ ಹಾಗೂ ಸಾಮಾಜಿಕ ಜಾಲತಾಣಗಳು ಪ್ರಭಾವಶಾಲಿಯಾಗಿ ಬೆಳೆಯುತ್ತಿದ್ದು, ಮುದ್ರಣ ಮಾಧ್ಯಮಗಳು ಕ್ಷೀಣಿಸುತ್ತಿವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ರಾಜ್ಯ ಕಾರ್ಯನಿರತ ಗ್ರಾಮೀಣ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುದ್ರಣ ಮಾಧ್ಯಮದಲ್ಲಿ ಸತ್ಯ ಹಾಗೂ ನಿಖರ ಸುದ್ದಿ ಪ್ರಕಟವಾಗುತ್ತವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚು ಹರಿದಾಡುತ್ತವೆ. ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಬೇಕು. ನಕಲಿ ಸುದ್ದಿಗಳ ಹಾವಳಿಯಿಂದ ಸಮಾಜ ರಕ್ಷಿಸಲು ಮುದ್ರಣ ಮಾಧ್ಯಮ ಬಲಗೊಳ್ಳಬೇಕು. ಪತ್ರಕರ್ತರು ವಿಷಯದ ಬಗ್ಗೆ ಆಳವಾದ ಜ್ಞಾನ ಹೊಂದಿರಬೇಕು. ಸಮಾಜಕ್ಕೆ ಶಕ್ತಿ ತುಂಬುವ ಬರಹ ಪತ್ರಕರ್ತರದ್ದಾಗಿರಬೇಕು ಎಂದರು.

ಮಾಜಿ ಶಾಸಕ ಶಹಜಾನ ಡೊಂಗರಗಾಂವ ಮಾತನಾಡಿ, ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಮುದ್ರಣ ಮಾಧ್ಯಮ ಹಾಗೂ ಗ್ರಾಮೀಣ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಮುದ್ರಣ ಮಾಧ್ಯಮ ಅಸ್ತಿತ್ವ ಮತ್ತು ಪ್ರಾಮುಖ್ಯತೆ ಎತ್ತಿ ಹಿಡಿಯುವಲ್ಲಿ ಸರ್ಕಾರ ಮತ್ತು ಸಮಾಜ ಹೆಚ್ಚು ಗಮನ ಹರಿಸಬೇಕಿದೆ ಎಂದು ಹೇಳಿದರು.

ಜಾನಪದ ಸಾಹಿತಿ ಗುರುರಾಜ ಹೊಸಕೋಟೆ ಮಾತನಾಡಿ, ದಿನಪತ್ರಿಕೆಗಳು ತಮ್ಮ ಮೌಲ್ಯ ಕಳೆದುಕೊಂಡಿಲ್ಲ. ಸಾಮಾಜಿಕ ಜಾಲತಾಣಗಳ ಹಾವಳಿ ಮಧ್ಯೆಯೂ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ ಎಂದರು. ಸಾನ್ನಿಧ್ಯ ವಹಿಸಿದ್ದ ತೆಲಸಂಗದ ವೀರೇಶ್ವರ ದೇವರು ಮಾತನಾಡಿ, ನಿತ್ಯ ಪತ್ರಿಕೆ ಓದುವ ಸಂಸ್ಕೃತಿ ಬೆಳೆಯಬೇಕು ಎಂದು ತಿಳಿಸಿದರು.

ವಕೀಲ ಅಮೋಘ ಖೊಬ್ರಿ, ಶಿವು ಗುಡ್ಡಾಪೂರ, ಕಲಾವಿದ ನಿಂಗರಾಜ ಸಿಂಗಾಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಬಸವಂತ ಗುಡ್ಡಾಪೂರ, ಹಿರಿಯರಾದ ಗಟಿವಾಳಪ್ಪ ಗುಡ್ಡಾಪೂರ, ಅಡಿವೆಪ್ಪ ಕೆಂಚಣ್ಣವರ, ಈರಗೌಡ ಪಾಟೀಲ, ಮಹಾದೇವ ಹಿಪ್ಪರಗಿ, ಬಸವರಾಜ ದೂಳಶೆಟ್ಟಿ, ಸಿದ್ದರಾಯ ಕೋಹಳ್ಳಿ, ಕುಮಾರ ಪಾಟೀಲ, ವೆಂಕಟೇಶ ಕುಲಕರ್ಣಿ, ಅರುಣ ಕೋಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net