

ಬೀದರ್: ವರದಿಗಳಲ್ಲಿ ನೈಜತೆ ಇದ್ದಾಗ ಮಾತ್ರ ಜನರು ಮಾಧ್ಯಮಗಳ ಮೇಲೆ ನಂಬಿಕೆ ಇಡಲು ಸಾಧ್ಯ. ಹೀಗಾಗಿ ಪತ್ರಕರ್ತರು ಸದಾ ಸತ್ಯಾನ್ವೇಷಣೆ ಮಾಡಿ ವರದಿಗಳನ್ನು ಪ್ರಕಟಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಮಾನ್ಯತೆ ಪಡೆದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಡಿ ಪ್ರತಾಪನಗರದಲ್ಲಿರುವ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಹಿಂದಿನಕ್ಕಿಂತಲೂ ಪ್ರಸ್ತುತ ಮಾಧ್ಯಮ ಕ್ಷೇತ್ರದ ಜವಾಬ್ದಾರಿ ಹೆಚ್ಚಿದೆ. ಸೌಹಾರ್ದ ಭಾರತ ಕಟ್ಟಬೇಕಾದರೆ ನೈಜ ವರದಿಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದರು.
ಮಾಧ್ಯಮಗಳು ತಮ್ಮ ವರದಿಯಲ್ಲಿ ನೈಜತೆ ಮತ್ತು ಪಾರದರ್ಶಕತೆಯನ್ನು ಕಾಪಾಡಿದರೆ ಮಾಧ್ಯಮ ರಂಗದ ಗೌರವ ಹೆಚ್ಚಾಗಲು ಸಾಧ್ಯ. ತಮ್ಮ ಸ್ಥಾನಮಾನಕ್ಕೆ ಧಕ್ಕೆ ಬರದಂತೆ ಪತ್ರಕರ್ತರು ಕಾರ್ಯನಿರ್ವಹಿಸುವ ಅಗತ್ಯವಿದೆ. ವಿವಿಧ ಕ್ಷೇತ್ರಗಳಂತೆ ಮಾಧ್ಯಮವೂ ಕಲುಷಿತವಾಗಿದೆ. ನೈಜತೆ, ಪಾರದರ್ಶಕ ಸುದ್ದಿ ಕೊಡುವಲ್ಲಿ ದೃಶ್ಯ ಮಾಧ್ಯಮಕ್ಕಿಂತ ಪತ್ರಿಕೆಗಳ ವಿಶ್ವಾಸಾರ್ಹತೆ ಹೆಚ್ಚಿದೆ. ಸತ್ಯದ ಸಂಶೋಧನೆ ಮೂಲಕ ಸುದ್ದಿಗಳನ್ನು ಜನರ ಮುಂದಿಡಬೇಕು ಎಂದು ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3000 ಕೋಟಿ ರೂ. ಹಾಗೂ ಹಿಂದಿನ 2000 ಕೋಟಿ ರೂ. ಸೇರಿ ಐದು ಸಾವಿರ ಕೋಟಿ ರೂ. ಲಭ್ಯವಿದೆ. ಬರುವ ಮಾರ್ಚ್ ಒಳಗೆ ಖರ್ಚು ಮಾಡಬೇಕಿದೆ. ಕ್ರಿಯಾಯೋಜನೆ ಸಿದ್ಧಪಡಿಸಿ ಈ ಭಾಗದ ಅಭಿವೃದ್ಧಿಗೆ ಅನುದಾನ ಬಳಸಿಕೊಳ್ಳುವುದಾಗಿ ತಿಳಿಸಿದರು.
ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದು ಪಾಟೀಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು. ಪೌರಾಡಳಿತ ಸಚಿವ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು.
ಮಾನ್ಯತೆ ಪಡೆದ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಏಸಿಯಾ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸಂಚಾಲಕ ಮದನಗೌಡ, ಡಿಸಿ ಗೋವಿಂದರಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಜಿಪಂ ಸಿಇಒ ಶಿಲ್ಪಾ ಎಂ., ಜಿಕೆ ಫೌಂಡೇಷನ್ ಸಂಸ್ಥಾಪಕ ಗುರುನಾಥ ಕೊಳ್ಳುರ್, ಪ್ರಮುಖರಾದ ಬಸವರಾಜ ಜಾಬಶೆಟ್ಟಿ, ಸುರೇಶ ಚನ್ನಶೆಟ್ಟಿ, ಮಲ್ಲಿಕಾರ್ಜುನ ಬಿರಾದಾರ್, ಎಸ್.ಎಸ್. ಖಾದ್ರಿ, ಸಿದ್ರಾಮಯ್ಯ ಸ್ವಾಮಿ, ಗಂಧರ್ವ ಸೇನಾ, ಬಸವರಾಜ ಧನ್ನೂರ, ದೀಪಕ ವಾಲಿ, ಆನಂದ ದೇವಪ್ಪ ಇತರರಿದ್ದರು.
ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಬಾಬು ವಾಲಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ. ಗಣಪತಿ ಸ್ವಾಗತಿಸಿದರು. ಶಿವಕುಮಾರ ಸ್ವಾಮಿ ನಿರೂಪಣೆ ಮಾಡಿದರು. ಜಿಲ್ಲಾ ವಾರ್ತಾಧಿಕಾರಿ ಸುರೇಶಕುಮಾರ ವಂದಿಸಿದರು.
ನೂತನ ಪತ್ರಿಕಾ ಭವನದಲ್ಲಿ ಸುಸಜ್ಜಿತ ಫರ್ನಿಚರ್ ಕೆಲಸಕ್ಕಾಗಿ ಜಿಕೆ ಫೌಂಡೇಷನ್ ಸಂಸ್ಥಾಪಕರೂ ಆದ ಬಿಜೆಪಿ ಹಿರಿಯ ಮುಖಂಡ ಗುರುನಾಥ ಕೊಳ್ಳುರ್ 10 ಲಕ್ಷ ರೂ. ದೇಣಿಗೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಕೊಳ್ಳುರ್ ಅವರನ್ನು ಸನ್ಮಾನಿಸಲಾಯಿತು.