

ಹುಬ್ಬಳ್ಳಿ: ಖಾಲಿ ಇರುವ ಟ್ರ್ಯಾಕ್ವುನ್ ಹುದ್ದೆಗೆ ಭರ್ತಿ ಮಾಡಿಕೊಳ್ಳುವಂತೆ ಆಗ್ರಹಿಸಿ ಬುಧವಾರ ಇಲ್ಲಿಯ ನೈಋತ್ಯ ರೈಲ್ವೆ ಮಹಾಪ್ರಬಂಧಕರ ಕಚೇರಿ ಎದುರು ರೈಲ್ವೆ ಕೋರ್ಸ್ ಕಂಪ್ಲೀಟೆಡ್ ಆಕ್ಟ್ ಅಪ್ರೆಂಟಿಸ್ (ಸಿಸಿಎಎ)ಗಳು ಮತಪ್ರದರ್ಶನ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಸಿಎಎಗಳ ಮುಖಂಡ ರವಿ ಗಾಣಿಗೇರ, ‘ನಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ವಿವಿಧ ಹಂತದಲ್ಲಿ ಶಾಂತಿಯುತ ಹೋರಾಟ ಮಾಡುತ್ತ ಬಂದಿದ್ದು, ಕೆಲ ಅಧಿಕಾರಿಗಳು ವಿನಾಕಾರಣ ಸತಾಯಿಸುತ್ತಿದ್ದಾರೆ. ಹೀಗಾಗಿ, ರೈಲ್ವೆಯಲ್ಲಿ ಉದ್ಯೋಗ ಕಂಡುಕೊಳ್ಳಲೆಂದೇ ಸಾವಿರಾರು ಜನರು ತರಬೇತಿ ಪಡೆದುಕೊಂಡಿರುವುದು ವ್ಯರ್ಥವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೈಋತ್ಯ ರೈಲ್ವೆ ಮತ್ತು ಮೀಸಲು ಕಾರ್ಯಪಡೆಗೆ ಸಂಬಂಧಿಸಿ 2008ರಿಂದ 1017ರವರೆಗೆ 2,763 ಜನ ತರಬೇತಿ ಪಡೆದಿದ್ದು, ನೇಮಕಾತಿಗಾಗಿ ಕಾಯುತ್ತಿದ್ದಾರೆ. ರೈಲ್ವೆ ಮಂಡಳಿ ಆದೇಶದ ಪ್ರಕಾರ ಕೆಲ ರೈಲ್ವೆ ವಲಯಗಳು ನೇಮಕ ಮಾಡಿಕೊಂಡಿವೆ. ನೈಋತ್ಯ ರೈಲ್ವೆ ವಲಯದ ಹಿಂದಿನ ಮಹಾಪ್ರಬಂಧಕರು ನೇಮಕ ಮಾಡಿಕೊಳ್ಳದೆ ಅನ್ಯಾಯ ಮಾಡಿದ್ದರು. ಸುದೈವದಿಂದ ಈಗಿನ ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಅವರು ಖಾಲಿ ಇರುವ ಟ್ರ್ಯಾಕ್ವುನ್ ಹುದ್ದೆಗೆ ನೇಮಕಾತಿಗೆ ಕಳೆದ ಜ. 29ರಂದು ಆದೇಶ ಹೊರಡಿಸಿದ್ದಾರೆ. ಆದರೆ, ಪ್ರಧಾನ ಮುಖ್ಯ ಸಿಬ್ಬಂದಿ ಅಧಿಕಾರಿ (ಪಿಸಿಪಿಒ) ಮಹಾಪ್ರಬಂಧಕರ ಆದೇಶ ಜಾರಿ ವಿಷಯದಲ್ಲಿ ಮತ್ತೆ ರೈಲ್ವೆ ಮಂಡಳಿಗೆ ಪತ್ರ ಬರೆದು ಅನ್ಯಾಯ ಎಸಗಿದ್ದಾರೆ ಎಂದು ದೂರಿದರು.
ಗಂಟೆಗಟ್ಟಲೇ ಪ್ರತಿಭಟನೆ, ಘೊಷಣೆ ಕೂಗುವ ಮೂಲಕ ಗಮನ ಸೆಳೆದ ನಂತರ, ಸಿಸಿಎಎಗಳ ಮುಖಂಡರನ್ನು ಪಿಸಿಪಿಒ ಮಾತುಕತೆಗೆ ಕರೆದರು. ತಮ್ಮ ಭದ್ರತೆಗಾಗಿ ರೈಲ್ವೆ ಮಂಡಳಿಗೆ ಪತ್ರ ಬರೆದು ಸ್ಪಷ್ಟ ಮಾರ್ಗದರ್ಶನ ಕೇಳಿದ್ದಾಗಿ ಅಧಿಕಾರಿ ಸಮರ್ಥಿಸಿಕೊಂಡರು. ಒಂದು ಹಂತದಲ್ಲಿ, ಐಟಿಐ ಪ್ರಮಾಣಪತ್ರದ ಆಧಾರದಲ್ಲಿ ತರಬೇತಿ ಪಡೆದುಕೊಂಡಿರುವವರನ್ನು ನೇಮಕ ಮಾಡಿಕೊಳ್ಳಬಹುದು ಎಂಬ ಸೂಚನೆ ಇದೆ ಎಂದು ಅಧಿಕಾರಿ ಹೇಳಿದರು. ಆದರೂ ಮಂಡಳಿಯಿಂದ ತಮಗೆ ಆದೇಶ ಬರಬೇಕು ಎಂಬ ವಾದ ಬಿಡಲಿಲ್ಲ ಎಂದು ಮಾತುಕತೆ ನಂತರ ಮುಖಂಡರು ಪತ್ರಿಕೆಗೆ ತಿಳಿಸಿದರು.
ಮಧ್ಯಾಹ್ನ 3.30ರವರೆಗೆ ಪ್ರತಿಭಟನೆ ನಡೆಸಿದ ಅಪ್ರೆಂಟಿಸ್ಗಳು, ಮಾ. 27ರಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಶೀಘ್ರದಲ್ಲಿ ನೇಮಕಾತಿ ಮಾಡಿಕೊಳ್ಳುವಂತೆ ರೈಲ್ವೆ ಮಂಡಳಿಯಿಂದ ಪಿಸಿಪಿಒಗೆ ಆದೇಶ ಮಾಡಿಸುವಂತೆ ಕೋರಬೇಕು. ಅಗತ್ಯವೆನಿಸಿದರೆ, ಏ. 5ರಿಂದ ರೈಲ್ವೆ ಮಹಾಪ್ರಬಂಧಕರ ಕಚೇರಿ ಎದುರು ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಬೇಕು ಎಂಬ ತೀರ್ಮಾನ ತೆಗೆದುಕೊಂಡು, ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.