ಸತ್ಯಾಗ್ರಹ ಕೈಬಿಟ್ಟ ಪಿಗ್ಮಿ ಏಜೆಂಟರು

11-pnp 1
Published on

ಪಾಂಡವಪುರ: ಪಾಂಡವಪುರ ಕಸಬಾ ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ನೌಕರರು ದುರ್ಬಳಕೆ ಮಾಡಿಕೊಂಡಿರುವ ಪಿಗ್ಮಿ ಹಣವನ್ನು ಮರು ಪಾವತಿಸುವಂತೆ ಆಗ್ರಹಿಸಿ ಪಿಗ್ಮಿ ಏಜೆಂಟರು ನಡೆಸುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮನವಿ ಮೇರೆಗೆ ಕೈಬಿಟ್ಟರು.

ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರು ಮತ್ತು ಈ ಹಿಂದೆ ಸಿಇಒ ಆಗಿದ್ದ ಎಚ್.ಸಂದೇಶ್, ಹಿಂದಿನ ಕ್ಯಾಷಿಯರ್ ಹಾಗೂ ಈಗ ಸಿಇಒ ಆಗಿರುವ ಕಿರಣ್‌ಕುಮಾರ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಮೇಶ್, ಲೆಕ್ಕ ಪರಿಶೋಧಕ ಪ್ರವೀಣ್‌ಕುಮಾರ್ ಸೇರಿದಂತೆ ಸಂಘದ ನೌಕರರು ಗ್ರಾಹಕರ ಪಿಗ್ಮಿ ಹಣ ಒಂದೂವರೆ ಕೋಟಿ ರೂ. ಜತೆಗೆ ಇನ್ನಿತರ ಮೂಲಗಳಿಂದ ಸಂಗ್ರಹವಾಗಿದ್ದ ಏಳು ಕೋಟಿ ರೂ.ಗೂ ಅಧಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ ಸಂಘದ ವಹಿವಾಟು ಕುಸಿದಿದೆ. ಬ್ಯಾಂಕಿನ ಮೇಲೆ ವಿಶ್ವಾಸವಿಟ್ಟು ಹೊಟ್ಟೆ ಬಟ್ಟೆ ಕಟ್ಟಿ ಪಿಗ್ಮಿ ಕಟ್ಟಿದ್ದ ಜನರಿಗೆ ಆಡಳಿತ ಮಂಡಳಿ ಮತ್ತು ನೌಕರರು ವಂಚನೆ ಮಾಡುತ್ತಿದ್ದಾರೆ. ಇದರಿಂದ ಪಿಗ್ಮಿದಾರರು ಹಣ ಹಿಂದಿರುಗಿಸುವಂತೆ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹೀಗಾಗಿ ನಾವು ಗ್ರಾಹಕರಿಂದ ವಸೂಲಿ ಮಾಡಿ ಸಂಘಕ್ಕೆ ಕಟ್ಟಿರುವ ಹಣವನ್ನು ಮರು ಪಾವತಿಸಲು ಸೂಚಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಧರಣಿ ಸ್ಥಳದಲ್ಲಿದ್ದ ಸಂಘದ ಷೇರುದಾರರು ಎಚ್.ಡಿ.ಶ್ರೀಧರ್ ಮಾತನಾಡಿ, ಸಂಘದಲ್ಲಿ ನಡೆದಿರುವ ಕೋಟಿಗಟ್ಟಲೇ ರೂ. ಅವ್ಯವಹಾರಕ್ಕೆ ಸಂಘದ ಆಡಳಿತ ಮಂಡಳಿ ಮತ್ತು ನೌಕರ ವರ್ಗವೇ ನೇರ ಕಾರಣ. ಜತೆಗೆ ಡಿಸಿಸಿ ಬ್ಯಾಂಕ್, ಸಹಕಾರ ಸಂಘಗಳ ನಿಬಂಧಕ ನಾಗಭೂಷಣ್, ಸಂಘದ ಲೆಕ್ಕಪರಿಶೋಧಕ ಪ್ರವೀಣ್ ಕುಮಾರ್ ಅವರ ಕೈವಾಡದಿಂದಲೇ ಕೋಟಿಗಟ್ಟಲೇ ರೂ. ದುರುಪಯೋಗವಾಗಿದೆ. ಸಂಘದ ಆಡಿಟ್‌ನಲ್ಲಿ ದುರ್ಬಳಕೆ ಆಗಿರುವ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಬಳಿ ದುರ್ಬಳಕೆ ಹಣವನ್ನು ವಸೂಲಿ ಮಾಡುವ ಜತೆಗೆ ಅವರ ವಿರುದ್ಧ ಸಾರ್ವಜನಿಕರ ಹಣ ದುರ್ಬಳಕೆ, ವಂಚನೆ, ದ್ರೋಹಗಳಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸಂಘದಲ್ಲಿ ನಡೆದಿರುವ ಅವ್ಯವಹಾರ ದೊಡ್ಡ ಮಟ್ಟದಲ್ಲಿದೆ. ಈಗಾಗಲೇ ಹಣ ವಸೂಲಿ ಮಾಡುವ ಬಗ್ಗೆ ಕ್ರಮಕ್ಕೆ ಮುಂದಾಗಿದ್ದೇವೆ. ಹಣ ವಸೂಲಿ ಜತೆಗೆ ಸಹಕಾರ ಸಂಘಗಳನ್ನು ಉಳಿಸಿಕೊಂಡು ಹೋಗುವುದೂ ನಮ್ಮ ಕರ್ತವ್ಯವಾಗಿದೆ. ಹಣ ವಸೂಲಿಗೆ ಸಂಬಂಧಿಸಿದಂತೆ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗಿದೆ. ಆದರೆ ಅದನ್ನು ಬಹಿರಂಗಪಡಿಸುವಂತಿಲ್ಲ. ಪಿಗ್ಮಿ ಸಂಗ್ರಹಗಾರರ ಸಮಸ್ಯೆ ನಮಗೆ ಅರ್ಥವಾಗುತ್ತದೆ. ಈ ಸಮಸ್ಯೆಯನ್ನು ಹತ್ತು, ಹದಿನೈದು ದಿನಗಳಲ್ಲಿ ಬಗೆಹರಿಸಲು ಸಾಧ್ಯವಾಗಲ್ಲ. ಇದಕ್ಕೆ ತಿಂಗಳುಗಟ್ಟಲೇ ಸಮಯಬೇಕು. ಎಲ್ಲವನ್ನೂ ಕಾನೂನು ರೀತಿಯಲ್ಲಿ ವಸೂಲಿ ಮಾಡಲಾಗುವುದು. ಆಡಳಿತ ಮಂಡಳಿಯ ಈ ಹಿಂದಿನ ಎಲ್ಲ ಅಧ್ಯಕ್ಷರು ಮತ್ತು ನಿರ್ದೇಶಕರು, ಸಂಘದ ಈ ಹಿಂದಿನ ಸಿಇಒ, ಹಾಲಿ ಸಿಇಒ, ನೌಕರರು ಮತ್ತು ಅಧಿಕಾರಿ ವರ್ಗ ಎಲ್ಲರೂ ಇಲ್ಲಿ ಪಾಲುದಾರರೇ ಆಗಿದ್ದಾರೆ. ಹೀಗಾಗಿ ವಸೂಲಿ ಮಾಡುವುದು ಸ್ವಲ್ಪ ತಡವಾದರೂ ಒಂದು ರೂಪಾಯಿ ಬಿಡದಂತೆ ವಸೂಲಿ ಮಾಡಲಾಗುವುದು. ಅಲ್ಲಿವರೆಗೆ ಪಿಗ್ಮಿದಾರರು ಉಪವಾಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕಾಲಾವಕಾಶ ಕೊಟ್ಟು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಬಿಡಬೇಕು ಎಂದು ಮನವಿ ಮಾಡಿದರು. ಶಾಸಕ ಮನವಿ ಮೇರೆಗೆ ಪಿಗ್ಮಿದಾರರು ಉಪವಾಸ ಸತ್ಯಾಗ್ರಹ ಕೈಬಿಟ್ಟರು.

ಸಂಘದ ಅಧ್ಯಕ್ಷ ಬೇವಿನಕುಪ್ಪೆ ಬಿ.ಎನ್.ಯೋಗೇಶ್, ಮಾಜಿ ಅಧ್ಯಕ್ಷ ಶಿವರಾಮು, ಎಚ್.ಡಿ.ಶ್ರೀಧರ, ಬಾಲಗಂಗಾಧರ, ಶಾಂತಿಪ್ರಸಾದ್, ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಪಿಗ್ಮಿ ಏಜೆಂಟರಾದ ನಿಂಗೇಗೌಡ, ಅನಿಲಕುಮಾರ್, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net