ಸತ್ಯಸಾಯಿ ಸಂಸ್ಥೆಯಲ್ಲಿ ಪರಿಣಾಮಕಾರಿ ಸೇವೆಗೆ ಎಐ ತಂತ್ರಜ್ಞಾನ

IMG-20250916-WA0033.jpg
Published on

ಚಿಕ್ಕಬಳ್ಳಾಪುರ: ಸತ್ಯಸಾಯಿ ಸಂಸ್ಥೆಯ ವಿಶಿಷ್ಟ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಮುಂಬರುವ ನವೆಂಬರ್ ಅಂತ್ಯಕ್ಕೆ ಕೃತಕ ಬುದ್ಧಿಮತ್ತೆ ಆಧಾರಿತ ಆ್ಯಪ್ ಪರಿಚಯಿಸಲಾಗುತ್ತಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಪ್ರೇಮಾಮೃತಮ್‌ ಸಭಾಂಗಣದಲ್ಲಿ ಮಂಗಳವಾರ ಕೈಗೊಂಡಿದ್ದ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 32ನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಹಲವು ವರ್ಷಗಳಿಂದಲೂ ಭಾರತೀಯರು ಮೌಖಿಕ, ಲಿಖಿತ ಪರಂಪರೆಯಲ್ಲಿ ಕಲಿತುಕೊಂಡು ಬರುತ್ತಿದ್ದು ಇದೀಗ ಆಧುನಿಕ ತಂತ್ರಜ್ಞಾನದ ಸಮಯ. ಎಲ್ಲದರ ಜತೆ ಸಾಗಬೇಕಿದೆ. ಇದಕ್ಕೆ ಆಡಿಯೋ ಮತ್ತು ವಿಡಿಯೋ ತಂತ್ರಗಳನ್ನು ಹೊಂದಿರುವ ಎಐ ತಂತ್ರಜ್ಞಾನವನ್ನು ಬಳಸುವುದು ಅಗತ್ಯವಾಗಿದೆ. ಸತ್ಯ ಸಾಯಿ ಸಂಸ್ಥೆಗಳಲ್ಲಿ ಈ ಆಧುನಿಕತೆಯ ವಿಧಾನದಿಂದ ಉಪನ್ಯಾಸ ಮತ್ತು ಪ್ರಕಟವಾಗುವ ಪುಸ್ತಕಗಳನ್ನು ಅವರವರ ಭಾಷೆಗಳಲ್ಲಿಯೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
'ಸನಾತನ ವಾಣಿಯನ್ನು ಎಐ ತಂತ್ರಜ್ಞಾನದ ಮೂಲಕ ಬಹು ಭಾಷೆಗಳಲ್ಲಿ ಪ್ರಸಾರ ಮಾಡಲಿದ್ದು ಇದು ಎಲ್ಲರಿಗೂ ಅಧ್ಯಾತ್ಮಿಕ ಸಂದೇಶಗಳನ್ನು ತಲುಪಿಸಲಿದೆ. ಸದ್ಗುರುವಿನ ಧ್ವನಿಯು ಸ್ಪೇನ್, ಜರ್ಮನಿ, ಡಚ್, ರಷ್ಯಾ, ಇಟಲಿ ಸೇರಿದಂತೆ ಬಹುಭಾಷೆಗಳಲ್ಲಿ ಕೇಳಿ ಬರಲಿದೆ. ಇನ್ನೂ ಇಂದಿನ ಪೀಳಿಗೆಯವರಿಗೆ ಪುಸ್ತಕವನ್ನು ಓದುವಷ್ಟು ತಾಳ್ಮೆಯಿಲ್ಲ. ಇದಕ್ಕೆ ಆಡಿಯೊ ಪುಸ್ತಕಗಳನ್ನು ಸಹ ಹೊರ ತರಲಾಗುತ್ತಿದೆ ಎಂದರು.

*ಸಾಧಕರಿಗೆ ಪುರಸ್ಕಾರ
ಪೌಷ್ಟಿಕ ಆಹಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸೇವೆಗೆ ಫಿಲಿಪ್ಸ್ ಇಂಡಿಯಾ ಕಂಪನಿಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ ಹಾಗೂ ನೆದರ್‍‌ಲೆಂಡ್ಸ್ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆಗೆ ಎರಿಕ್ ಲಾರಕ್ಕರ್ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ' ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net