ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯುವ ಸಮ್ಮೇಳನಕ್ಕೆ ತೆರೆ

23CBP3b
Published on

ಚಿಕ್ಕಬಳ್ಳಾಪುರ : ಆಗಮಿಕ ಪಂಡಿತರಿಂದ ವಿವಿಧ ಹೋಮಗಳು, ಸತ್ಯಸಾಯಿ ಬಾಬಾ ನಾಮಸ್ಮರಣೆಯಲ್ಲಿ ಆಧ್ಯಾತ್ಮಿಕ ಚಿಂತನ ಮಂಥನ, ಕಣ್ಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ, ಗಣ್ಯಾತಿ ಗಣ್ಯರ ಸಂದೇಶ ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದ ಭಕ್ತರು.

ಇದು ಮುದ್ದೇನಹಳ್ಳಿಯ ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯಲ್ಲಿ ಸೋಮವಾರ ವಿಶ್ವ ಯುವ ಸಮ್ಮೇಳನ ಸಮಾರೋಪ ಹಾಗೂ ಸತ್ಯಸಾಯಿ ಬಾಬಾ ಜನ್ಮ ದಿನಾಚರಣೆಯಲ್ಲಿ ಕಂಡು ಬಂದ ಸಂಭ್ರಮದ ಕ್ಷಣ. ಆಧ್ಯಾತ್ಮಿಕತೆ ಮತ್ತು ಸೇವೆ ಎಂಬ ಘೋಷಣೆಯೊಂದಿಗೆ ನ.13 ರಿಂದ ಸಮ್ಮೇಳನಕ್ಕೆ ಚಾಲನೆ ನೀಡಲಾಗಿತ್ತು. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸೀಮಿತ ಭಕ್ತರು ಮತ್ತು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಗಳ ವೀಕ್ಷಣೆಗೆ ಆನ್‌ಲೈನ್ ವ್ಯವಸ್ಥೆ ಕೈಗೊಂಡಿದ್ದು ದೇಶ ವಿದೇಶಗಳ ಜನರು ಕುಳಿತಲ್ಲಿಯೇ ಸಮ್ಮೇಳನ ವೀಕ್ಷಿಸಿದರು.

ವಿಶ್ವ ಯುವ ಸಮ್ಮೇಳನದ ಅಂಗವಾಗಿ ಪ್ರತಿನಿತ್ಯ ವಿವಿಧ ಕ್ಷೇತ್ರದ ಗಣ್ಯರು, ದೇಶ ವಿದೇಶದ ಧಾರ್ಮಿಕ ಗುರುಗಳಿಂದ ಉಪನ್ಯಾಸ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾರೋಪದ ಜತೆಗೆ, ಬಾಬಾ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಿದ್ಯಾಸಂಸ್ಥೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ ಸತ್ಯಸಾಯಿ ಪ್ರೇಮಾಮೃತಂ ಸಭಾ ಭವನಕ್ಕೆ ಸದ್ಗುರು ಮಧುಸೂದನ ಸಾಯಿ ಅವರನ್ನು ಕರೆದುಕೊಂಡು ಬಂದು ಪೂರ್ಣಕುಂಭ ಸ್ವಾಗತ ಕೋರಲಾಯಿತು. ಸಭಾ ಭವನದಲ್ಲಿ ನರೆದಿದ್ದವರು ಬಾಬಾ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.

ಆತ್ಮವಿಶ್ವಾಸವೇ ಮುನ್ನಡೆಸುತ್ತದೆ : ದೃಢ ಆತ್ಮವಿಶ್ವಾಸವೇ ನಮ್ಮನ್ನು ಸಮರ್ಥವಾಗಿ ಮುನ್ನಡೆಸಿ, ವಿಜಯಿಗಳನ್ನಾಗಿಸುತ್ತದೆ ಎಂದು ಸದ್ಗುರು ಮಧುಸೂದನ್ ಸಾಯಿ ಅಭಿಪ್ರಾಯಪಟ್ಟರು. ಸಮ್ಮೇಳನದ ಸಮಾರೋಪವನ್ನು ಉದ್ದೇಶಿಸಿ ಮಾತನಾಡಿ, ಯುವಜನರು ಹಂತ ಹಂತವಾಗಿ ಬೆಳವಣಿಗೆ ಸಾಧಿಸುವ ಯೋಜನೆ ರೂಪಿಸಿಕೊಳ್ಳಬೇಕು. ಇದು ಕಾಲಘಟ್ಟದ ಗುಣಧರ್ಮದ ಆಧಾರದ ಮೇಲೆ ಇರಬೇಕು ಎಂದರು.

ಯೌವ್ವನ ಸಂಖ್ಯೆಗೆ ಮಾತ್ರ ಸೀಮಿತ. ಸ್ಪೂರ್ತಿಗೆ ವಯೋಮಾನದ ಕಾಲಮಿತಿ ಇಲ್ಲ. ಪ್ರಪಂಚವು ದ್ವಂದ್ವದ ಗೂಡಾಗಿರುವುದನ್ನು ಅರಿತು ಯುವ ಜನತೆ ಎಚ್ಚರಿಕೆಯಿಂದ ಮುನ್ನಡೆಯಬೇಕು. ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಇದಕ್ಕೆ ಉತ್ತಮ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.ಭೂತ, ವರ್ತಮಾನ, ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಬೇಕು. ವೈಯಕ್ತಿಕ ನೆಲೆಯನ್ನು ಗಟ್ಟಿಸಿಕೊಳ್ಳುತ್ತಿರುವುದರ ಜತೆಗೆ ವಿಶ್ವ ಸೌಹಾರ್ದಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಮಾನವಾಭ್ಯುದಯ ವಿಶ್ವ ವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಕ್ಷೇತ್ರದಲ್ಲಿ ವಿಫಲರಾದಾಗ ಪಲಾಯನ ಮಾಡುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ಸೋಲು-ಗೆಲುವುಗಳು ಎದುರಾಗುತ್ತವೆ. ಇವುಗಳನ್ನು ಸವಾಲುಗಳಾಗಿ ಸ್ವೀಕರಿಸಬೇಕು ಎಂದರು.ತುಮಕೂರು ಜಿಲ್ಲೆಯ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ, ಸತ್ಯಸಾಯಿ ಸಂಜೀವಿನಿ ಆಸ್ಪತ್ರೆ ಮುಖ್ಯಸ್ಥ ಸಿ.ಶ್ರೀನಿವಾಸ್ ಮತ್ತಿತರರು ಇದ್ದರು.

ಆಕರ್ಷಕ ಕಾರ್ಯಕ್ರಮ : ಪ್ರತಿ ವರ್ಷದಂತೆ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮೊದಲ ದಿನ ಭಾರತದ ವೈವಿಧ್ಯತೆಯ ಸಂಗೀತ ಪ್ರದರ್ಶನ ನಡೆಯಿತು. ನವದುರ್ಗಾ ನೃತ್ಯ, ಅಖಂಡ ಭಜನೆ, ಡಾ ಪದ್ಮಾ ಮತ್ತು ತಂಡ, ತನುಶ್ರೀ ತಂಡದಿಂದ ನೃತ್ಯ, ಶಿವಭಕ್ತಿ, ಕುನಾಲ್ ಮತ್ತು ಗಾಯತ್ರಿ ಗಾಂಜಾವಾಲ ತಂಡ, ಡಾ. ಜಯಂತಿ ಕುಮರೇಶ್ ಮತ್ತು ಕುಮರೇಶ್ ಸಂಗೀತ ಕಾರ್ಯಕ್ರಮ, ಬ್ರಾಸ್ ಬ್ಯಾಂಡ್ ಮೇಳ, ಜಟಾಯು ಮೋಕ್ಷಂ ಕಲಾಕ್ಷೇತ್ರ, ಸಿಂಗಾಪುರ ತಂಡದಿಂದ ನಾಟಕ, ವಾದ್ಯಗೋಷ್ಠಿ ಸಮ್ಮೇಳನಕ್ಕೆ ಮೆರುಗು ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net