

ಬೇತಮಂಗಲ: ಕರ್ನಾಟಕ ಬಂದ್‌ಗೆ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಸತ್ಯವನ್ನು ಸುಳ್ಳು ಮಾಡಲು ಹೊರಟಿದೆ. ನಾವು ಬಿಜೆಪಿಯವರು ಇದೇ ದಿನವನ್ನು ಅಭಿವೃದ್ಧಿಯ ಹಾದಿಯನ್ನಾಗಿಸಿದ್ದೇವೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಕೆಜಿಎಫ್ ಕ್ಷೇತ್ರದ ಕ್ಯಾಸಂಬಳ್ಳಿ ಜಿಪಂನ ಪೋತರಾಜನಹಳ್ಳಿ ಸೇರಿ ಒಟ್ಟು 12 ಹಳ್ಳಿಗಳಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ಉದ್ಘಾಟಿಸಿ ಸುದ್ಧಿಗಾರರೊಂದಿಗೆ ಮಾತನಾಡಿ, ಭೂ ಸುದಾರಣೆ ಮತ್ತು ಎಪಿಎಂಸಿಗೆ ತಿದ್ದುಪಡಿ ನಡೆಸುವುದಾಗಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ತಿಳಿಸಿತ್ತು. ಆದರೆ ಬಿಜೆಪಿ ಸರ್ಕಾರ ರೈತರಿಗೆ ಮತ್ತಷ್ಟು ಅನುಕೂಲವಾಗುವ ರೀತಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಯರೂಪಕ್ಕೆ ತರುತ್ತಿದೆ. ಈಗ ಇದನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದು ಹಾಸ್ಯಾಸ್ಪದ ಎಂದರು.
ಈ ಕಾಯ್ದೆಗಳ ಬಗ್ಗೆ ಸುಳ್ಳು ಹೇಳುವ ಮೂಲಕ ತಪ್ಪು ದಾರಿ ಗೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಯೋಜನೆ ಅಥವಾ ಕಾಯ್ದೆ ತಂದರೆ ಅದರಲ್ಲಿ ರೈತರಿಗೆ, ಬಡವರಿಗೆ, ಶ್ರಮಿಕರಿಗೆ ಲಾಭದಾಯಕವಾಗಿರುತ್ತದೆ ಎಂಬ ನಂಬಿಕೆ ರೈತರಿಗಿದೆ. ಈ ಕಾಯ್ದೆ ರೈತರ ಆದಾಯ ಖಂಡಿತ ದ್ವಿಗುಣವಾಗುತ್ತದೆ ಎಂದರು.
ಅಶೋಕನಗರ ರಸ್ತೆ ಕಟ್ಟಡಗಳ ತೆರವಿಗೆ ಸಂಬಂಧಪಟ್ಟಂತೆ ಮಾತನಾಡಿದ ಮುನಿಸ್ವಾಮಿ, ನಾನು ಮತ್ತು ಮಾಜಿ ಶಾಸಕ ಸಂಪಂಗಿ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ವಿವಾದದಲ್ಲಿದ್ದ ಕಟ್ಟಡ ತೆರವುಗೊಳಿಸಲು ದಿನಾಂಕ ನಿಗದಿ ಮಾಡಿದ್ದೆವು. ಇದನ್ನು ತಿಳಿದುಕೊಂಡ ಶಾಸಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಪ್ರಚಾರ ಪಡೆಯಲು ಯತ್ನಿಸಿದರು. ಕೋರಮಂಡಲ್ ವೃತ್ತದಿಂದ ಗಾಂಧಿವೃತ್ತದವರೆಗೆ ರಸ್ತೆ ಅಭಿವೃದ್ಧಿ ಯಾರ ಅವಧಿಯಲ್ಲಿ ಆಯ್ತು, ಅದರ ಸಮಸ್ಯೆ ಏನು, ಕೋರ್ಟ್‌ಗೆ ಕಳಿಸಿದ್ದು ಯಾರು ಇದೀಗ ನಾಟಕ ಆಡುತ್ತಿರುವುದು ಯಾರು ಎನ್ನುವುದು ಕೆಜಿಎಫ್ ಜನರಿಗೆ ತಿಳಿದಿದೆ ಎಂದರು.
ಮಾಜಿ ಶಾಸಕ ವೈ.ಸಂಪಂಗಿ, ಕ್ಯಾಸಂಬಳ್ಳಿ, ಜಿಪಂ ಸದಸ್ಯ ಜಯಪ್ರಕಾಶ್ ನಾಯ್ಡು, ಕೆಜಿಎಫ್ ನಗರಾಧ್ಯಕ್ಷ ಕಮಲನಾಥ್, ಮಂಜುನಾಥ್, ತಾಪಂ ಸದಸ್ಯ ಡಾ.ಕೃಷ್ಣಮೂರ್ತಿ, ಮುಖಂಡರಾದ ವೆಂಕಟರೆಡ್ಡಿ, ಧರಣಿ, ವಿಜಯಕುಮಾರ್, ಹೇಮಾರೆಡ್ಡಿ, ಗ್ರಾಪಂ ಮಾಜಿ ಸದಸ್ಯರಾದ ಅಪ್ಪಿ, ಚಲಪತಿ, ಜಯರಾಮ್, ಮುನಿಯಪ್ಪ, ಹಂಗಳ ರಮೇಶ್, ಕೆಯುಡಿಎ ಸದಸ್ಯ ರಾಮಚಂದ್ರ ಇತರರಿದ್ದರು.
ಪಂಚಾಯಿತಿ ಚುನಾವಣೆಯಲ್ಲಿ ಒಗ್ಗಟ್ಟು: ಸಂಸದರಾದ ನಂತರ ಕೆಜಿಎಫ್ ಕ್ಷೇತ್ರದಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ ಏಕೆ ಒಂದುಗೂಡಿಸಲು ಪ್ರಯತ್ನಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮುನಿಸ್ವಾಮಿ, ಲೋಕಸಭಾ ಚುನಾವಣೆಯಲ್ಲಿ ಯಾರ‌್ಯಾರು ಹೇಗೆ ಕೆಲಸ ಮಾಡಿದ್ದಾರೆ ಎಂದು ತಿಳಿದುಕೊಂಡಿದ್ದೇನೆ. ಇಲ್ಲೇ ಇದ್ದು ಕಾಂಗ್ರೆಸ್‌ಗೆ ಕೆಲಸ ಮಾಡಿದವರೂ ಇದ್ದಾರೆ. ಅಂತಹವರನ್ನೆಲ್ಲಾ ಒಗ್ಗೂಡಿಸಿಕೊಂಡು ಮುಂದೆ ಬರಲಿರುವ ಗ್ರಾಪಂ, ತಾಪಂ ಮತ್ತ ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದರು.