

ಬಸವಕಲ್ಯಾಣ: ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯುತ್ತಿಲ್ಲ. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪರಿಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸತ್ಯ ಮತ್ತು ಶಾಂತಿ ಧರ್ಮದ ಎರಡು ಕಣ್ಣುಗಳಿದ್ದಂತೆ. ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆಗೆ ಎರಡೂ ಅವಶ್ಯಕವಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಸೋಮವಾರ ರಾತ್ರಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ೮ನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಮನುಷ್ಯನ ಮನಸ್ಸು ಬುದ್ಧಿ ಮತ್ತು ಸದ್ವಿಚಾರಗಳು ಹುಲುಸಾಗಿ ಬೆಳೆದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಅನುಭವದಿಂದ ಸಿಗುವ ಜ್ಞಾನ ಓದಿನಿಂದ ಸಿಗಲ್ಲ. ಓರೆಗಲ್ಲಿಗೆ ಹಚ್ಚಿ ತಿಕ್ಕಿದಾಗ ಶ್ರೀಗಂಧ ಹೊರಹೊಮ್ಮುವಂತೆ ಸಂಕಷ್ಟಗಳನ್ನು ಎದುರಿಸಿದ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯ. ಗಾಢ ಅಂಧಕಾರದಲ್ಲಿ ಮುಳುಗಿದ ಮಾನವರನ್ನು ಎಚ್ಚರಿಸಿ ಜಾಗೃತಿ ಮೂಡಿಸುವುದು ಗುರುವಿನ ಆದ್ಯ ಕರ್ತವ್ಯ ಎಂದರು.
ಬದುಕಿನ ಉನ್ನತಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಅಡಿಪಾಯ. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮಪ್ರಜ್ಞೆ ಮತ್ತು ಸದಾಚಾರ ಬೆಳೆದು ಬರಬೇಕಾಗಿದೆ. ಧರ್ಮ ಸಂಸ್ಕೃತಿ ಮತ್ತು ಪರಂಪರೆ ಆದರ್ಶಗಳು ಮಹಿಳೆಯರಿಂದ ಬೆಳೆದು ಬಂದಿವೆ. ಉತ್ಕೃಷ್ಟ ಭಾರತೀಯ ಸಂಸ್ಕೃತಿ ಸಂವರ್ಧನೆಗೆ ಮಹಿಳೆಯರ ಕೊಡುಗೆ ಅಪಾರ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಮೇಹಕರ್-ತಡೋಳಾ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯ, ಪಾಳಾ ಹಿರೇಮಠದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯ, ಕಪಿಲಧಾರಾದ ಶ್ರೀ ಡಾ.ವಿರೂಪಾಕ್ಷ ಶಿವಾಚಾರ್ಯ, ಬೆಂಗಳೂರಿನ ಎಸ್‌ಜೆಆರ್ ಮಹಿಳಾ ವಿದ್ಯಾಲಯದ ಪ್ರಾಚಾರ್ಯೆ ಡಾ.ಪ್ರೇಮಾ ಸಿದ್ಧರಾಜು, ಕೆಎಎಸ್ ಅಧಿಕಾರಿ ಸಾವಿತ್ರಿ ಸಲಗರ, ಕಲಬುರಗಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಡಾ.ಮಹೇಶ ಪಾಟೀಲ್ ಕಲಬುರಗಿ ಮಾತನಾಡಿದರು.
ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹಾರಕೂಡ, ಶ್ರೀ ಅಭಿನವ ಘನಲಿಂಗ ರುದ್ರಮನಿ ಶಿವಾಚಾರ್ಯ, ಶ್ರೀ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ, ಶ್ರೀ ಡಾ.ಗುರುನಾಗಭೂಷಣ ಶಿವಾಚಾರ್ಯ, ಶಾಸಕ ಶರಣು ಸಲಗರ, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಬಿಕೆಡಿಬಿ ಆಯುಕ್ತ ಜಗನ್ನಾಥರಡ್ಡಿ, ಪ್ರಭು ಪಾಟೀಲ್, ಪದ್ಮಾಕರ ಪಾಟೀಲ್, ರಾಜಮತಿ ಭೂರಾಳೆ, ಸುನೀಲ ಪಾಟೀಲ್, ಸುರೇಶ ಸ್ವಾಮಿ, ಚಂದ್ರಕಾಂತ ಪಾಟೀಲ್, ಗಣಪತಿ ಮೈನಾಳೆ ಇದ್ದರು.
ಗೌರವ ಗುರುರಕ್ಷೆ: ಶ್ರೀ ಸೂತ್ರೇಶ್ವರ ಶಿವಾಚಾರ್ಯ ಅಚಲೇರಿ, ಶ್ರೀ ರಾಜಶೇಖರ ಶಿವಾಚಾರ್ಯ ಕಲಬುರಗಿ, ಶ್ರೀ ಶಿವಲಿಂಗ ಶಿವಾಚಾರ್ಯ ಮುಧೋಳ, ಶ್ರೀ ಗಂಗಾಧರ ಸ್ವಾಮೀಜಿ ಜವಳಿ, ಲೋಕಾಯುಕ್ತ ಅಧಿಕಾರಿ ಸಿದ್ಧರಾಜು ಸಿ., ರಾಚಯ್ಯ ಸ್ವಾಮಿ ರಂಜೋಳ ಅವರಿಗೆ ಗೌರವ ಗುರುರಕ್ಷೆ, ಸಮಾಜ ಸೇವಕ ಶರಣಪ್ಪ ಬಿರಾದಾರ್ ಅವರಿಗೆ ವೀರಶೈವ ಸಿರಿ ಪ್ರಶಸ್ತಿ ನೀಡಿ ಹಾಗೂ ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ್ ಅವರನ್ನು ಜಗದ್ಗುರುಗಳು ಆಶೀರ್ವದಿಸಿದರು. ಬಸವಂತಪ್ಪ ಲವಾರೆ ಸ್ವಾಗತಿಸಿದರು. ಶಾಂತಾ ಆನಂದ ಹಾಗೂ ರಮೇಶ ರಾಜೋಳೆ ನಿರೂಪಣೆ ಮಾಡಿದರು.
ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಶ್ರೀ ರಂಭಾಪುರಿ ಜಗದ್ಗುರುಗಳ ತತ್ವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು. ಜಗದ್ಗುರುಗಳ ಧರ್ಮ ಸಮ್ಮೇಳನ ಸಂಸ್ಕೃತಿಯ ಪುನರುತ್ಥಾನಕ್ಕೆ ಸಾಕ್ಷಿಯಾಗಿದೆ.
| ಡಾ.ಮಹೇಶ ಪಾಟೀಲ್ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ