ಸತ್ಯ ಶರಣರ ವಚನ ಅರಿತರೆ ನಿಜ ತತ್ವದ ಅನುಭವ

28 BK 1
ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ಭಾನುವಾರ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶದಲ್ಲಿ ಶ್ರೀ ಡಾ.ಸಿದ್ಧರಾಮ ಬೆಲ್ದಾಳ ಶರಣರನ್ನು ಸನ್ಮಾನಿಸಲಾಯಿತು. ಪೂಜ್ಯ ಡಾ ಗಂಗಾಂಬಿಕಾ ಅಕ್ಕ, ಪೂಜ್ಯ ಗಾಯತ್ರಿತಾಯಿ, ಪೂಜ್ಯ ಸತ್ಯಕ್ಕತಾಯಿ, ಶ್ರೀಕಾಂತ ಸ್ವಾಮಿ, ಅರ್ಜುನ ಕನಕ, ರವೀಂದ್ರ ಕೋಳಕುರ ಇದ್ದರು.
Published on

ಬಸವಕಲ್ಯಾಣ: ಸತ್ಯ ಶರಣರ ವಚನಗಳ ಆಳಕ್ಕಿಳಿದು ಅರ್ಥಪೂರ್ಣವಾಗಿ ಅರಿತುಕೊಂಡಾಗಲೇ ಅವರ ನಿಜ ತತ್ವದ ಸಂದೇಶ ಅನುಭವಕ್ಕೆ ಬರುತ್ತದೆ ಎಂದು ಬಸವಕಲ್ಯಾಣ ಬಸವ ಮಹಾಮನೆ ಸಂಸ್ಥೆಯ ಶ್ರೀ ಡಾ.ಸಿದ್ಧರಾಮ ಬೆಲ್ದಾಳ ಶರಣರು ಹೇಳಿದರು.

ನಗರದ ಹರಳಯ್ಯನವರ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಭಾನುವಾರ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ, ಸತ್ಯ ಶರಣರು ಸತ್ಯ ಶೋಧ ಗ್ರಂಥ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವಾದಿ ಶರಣರು ಸಕಲ ಜೀವರಾಶಿಗಾಗಿ ಅರ್ಥಪೂರ್ಣವಾದ ವೈಜ್ಞಾನಿಕವಾದ ತಾತ್ವಿಕತೆಯನ್ನು ನೀಡಿದ್ದಾರೆ. ಮಹಾಗುರು ಬಸವಣ್ಣನವರು ಹಾಗೂ ಅವರ ಸಮಕಾಲೀನ ಶರಣರ ಕುರಿತು ಇತಿಹಾಸದಲ್ಲಿ ಮತ್ತು ತತ್ವದಲ್ಲಿ ಅವರ ನಂತರ ಕಾಲದಲ್ಲಿ ಆಗಿರುವ ತಪ್ಪು ಕಲ್ಪನೆ, ತಪ್ಪು ತಿಳುವಳಿಕೆ ಹಾಗೂ ಆಚರಣೆಗಳ ಬಗ್ಗೆ ವಾಸ್ತವ ಸತ್ಯ ಬಿಚ್ಚಿಡುವುದೇ ಗ್ರಂಥದ ಆಶಯವಾಗಿದೆ. ಬಸವಾದಿ ಶರಣರು ಸ್ವತಂತ್ರರು ಅವರು ನೀಡಿದ ಮಾನವೀಯ ಮೌಲ್ಯ ಸ್ವತಂತ್ರವು ವಿಶ್ವ ವಿನೂತನವಾಗಿವೆ ಎಂದರು.

ನೇತೃತ್ವ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಜಾಗತಿಕ ಇತಿಹಾಸದಲ್ಲಿ ಬಸವಣ್ಣನವರ ನಾಯಕತ್ವದಲ್ಲಿ ಸತ್ಯ ಶರಣರಿಂದ ನಡೆದ ಕಲ್ಯಾಣ ಕ್ರಾಂತಿ ಜಾಗತಿಕ ಮೌಲ್ಯಗಳನ್ನು ಒಳಗೊಂಡಿದೆ. ಶರಣರ ಅರಿವು ಆಚಾರ ಅನುಭಾವ ಅಮೂಲ್ಯವಾದುದಾಗಿದೆ. ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ನೀಡಿದ ಸಂಸ್ಕೃತಿಯನ್ನು ಯುವ ಜನತೆ ತಿಳಿದುಕೊಳ್ಳಲು ದಾಖಲೆ ಸಹಿತ ಈ ಮಾಹಿತಿಯನ್ನು ಪೂಜ್ಯ ಬೆಲ್ದಾಳ ಶರಣರು ಗ್ರಂಥದಲ್ಲಿ ನೀಡಿದ್ದಾರೆ ಎಂದರು.

ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, ಸತ್ಯ ಶರಣರು ಸತ್ಯ ಶೋಧ ಗ್ರಂಥದಲ್ಲಿ ಸತ್ಯ ಶರಣರು ವಾಸ್ತವಿಕ ತತ್ವ ದರ್ಶನ ವಿಶ್ವಮೌಲ್ಯಗಳು, ಸ್ವತಂತ್ರ ಶರಣರ ಮೇಲೆ ಪ್ರಭುತ್ವ ಸಾಧನೆಯ ಯತ್ನ, ವೇದಗಮ ಪುರಾಣಗಳ ಅವಲೋಕನ, ಆಚಾರ್ಯರ ಅವಲೋಕನ ಎಂಬ ಭಾಗಗಳಿವೆ ಎಂದರು.

ಪೂಜ್ಯ ಗಾಯತ್ರಿತಾಯಿ ಸಮ್ಮುಖ ವಹಿಸಿ ಮಾತನಾಡಿದರು. ಪೂಜ್ಯ ಸತ್ಯಕ್ಕತಾಯಿ ವಚನ ಪಠಣ ಮಾಡಿದರು. ಬೀದರ್ ವಿವಿ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ, ರಾಷ್ಟ್ರೀಯ ಬಸವದಳ ತಾಲೂಕಾಧ್ಯಕ್ಷ ರವೀಂದ್ರ ಕೋಳಕೂರ ಇದ್ದರು. ಹರಳಯ್ಯ ಸಮಾಜದ ಮುಖಂಡ ವಿದ್ಯಾಸಾಗರ ಜಾಧವ್ ಧ್ವಜಾರೋಹಣಗೈದರು. ಪ್ರೊ.ಮೀನಾಕ್ಷಿ ಬಿರಾದಾರ ಸ್ವಾಗತಿಸಿದರು. ದತ್ತಾತ್ರೇಯ ಬಾಂದೇಕರ್ ನಿರೂಪಣೆ ಮಾಡಿದರು. ರಂಜನಾ ಭೂಶೆಟ್ಟಿ ಮತ್ತು ಅವಿನಾಶ ಭೋಸಗಾ ವಚನ ಸಂಗೀತ ನಡೆಸಿಕೊಟ್ಟರು. ಸಂಗೀತಾ ಸಿದ್ರಾಮಪ್ಪಾ ಪಟ್ನೆ ಭಕ್ತಿ ದಾಸೋಹ ವ್ಯವಸ್ಥೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net