ಸತ್ತೆಕೆರೆ ಏರಿ ದುರಸ್ತಿಗೆ ಆಗ್ರಹ

08 ಪಿ ವೈ ಪಿ 01
Published on

ಪಿರಿಯಾಪಟ್ಟಣ: ತಾಲೂಕಿನ ಕೋಗಿಲವಾಡಿ ಗ್ರಾಮದ ಸತ್ತೆಕೆರೆ ಏರಿಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೋಗಿಲವಾಡಿ ಗ್ರಾಮದಿಂದ ವಡ್ಡನಕಟ್ಟೆಹಾಡಿ, ಹೊಸೂರು ಕೆರೆಮಾಳ, ಎರೆಪರೆ, ಬೂದಿತಿಟ್ಟು, ಲಕ್ಷ್ಮೀಪುರ ಹಾಡಿ ಮತ್ತಿತರ ಗ್ರಾಮಗಳಿಗೆ ತೆರಳಲು ಈ ಕೆರೆ ಏರಿ ರಸ್ತೆ ಪ್ರಮುಖ ರಸ್ತೆಯಾಗಿದ್ದು, ಹಲವಾರು ವರ್ಷಗಳಿಂದ ಗುಂಡಿಗಳು ಬಿದ್ದು ಹಾಳಾಗಿದ್ದರೂ ಇದುವರೆಗೂ ದುರಸ್ತಿಯಾಗದೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂಬುದು ಸಾರ್ವಜನಿಕರ ಅಳಲಾಗಿದೆ.

ಮಾವಕಲ್ಲು, ಜೇನುಕಲ್ಲು ಅರಣ್ಯ ಪ್ರದೇಶಗಳಲ್ಲಿ ಮಳೆಯಾದಾಗ ಈ ಕೆರೆ ಬಹುತೇಕ ಭರ್ತಿಯಾಗುತ್ತಿದ್ದು, ಸುಮಾರು 25ರಿಂದ 30 ಅಡಿಗಳಷ್ಟು ಆಳವಿದೆ. ಕೆರೆ ತುಂಬಿದ ಬಳಿಕ ಕೋಡಿ ಬಿದ್ದ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕವಾದ ವ್ಯವಸ್ಥೆ ಇಲ್ಲದೆ ಕೆರೆ ಏರಿ ಬಿರುಕು ಬಿಟ್ಟಿದೆ. ಕೆರೆ ಏರಿಯ ಮತ್ತೊಂದು ಭಾಗದಲ್ಲಿ ಸುಮಾರು 30ರಿಂದ 40 ಅಡಿಗಳ 50 ಆಳದಲ್ಲಿ ರೈತರ ಭತ್ತದ ಗದ್ದೆಗಳಿದ್ದು ಕೆರೆ ತೂಬಿನಿಂದ ಗದ್ದೆಗಳಿಗೆ ನೀರು ಹಾಯಿಸಲಾಗುತ್ತಿದೆ. ಕೆರೆ ಏರಿ ಮೇಲೆ ನಿರ್ಮಿಸಿರುವ ರಸ್ತೆಯಲ್ಲಿ ಬಹುತೇಕ ಹಳ್ಳ ಕೊಳ್ಳಗಳೇ ಬಿದ್ದಿದ್ದು ಇದರಿಂದ ಕೆರೆ ಏರಿಯ ಗುಣಮಟ್ಟ ಕ್ಷೀಣಿಸುತ್ತಿರುವ ಆತಂಕ ಎದುರಾಗಿದೆ.

ಕೃಷಿ ಚಟುವಟಿಕೆಗೆ ಈ ಕೆರೆ ಏರಿಯ ಮೇಲಿನ ರಸ್ತೆಯಲ್ಲಿ ಸಾಗುವ ವಾಹನ ಸವಾರರು ತಮ್ಮ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಮುತ್ತಲಿನ ಗ್ರಾಮಗಳಿಂದ ಕೋಗಿಲವಾಡಿ ಗ್ರಾಮದ ಶಾಲೆಗೆ ವಿದ್ಯಾರ್ಥಿಗಳು ಈ ರಸ್ತೆಯನ್ನೇ ಬಳಸುತ್ತಿದ್ದು, ಮಳೆಗಾಲದಲ್ಲಿ ಓಡಾಡಲು ಸಾಹಸವನ್ನೇ ಪ್ರದರ್ಶಿಸಬೇಕಿದೆ. ಇತ್ತೀಚೆಗಷ್ಟೇ ಕಾಫಿ ತೋಟಗಳಿಗೆ ಕೂಲಿ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಜೀಪ್ ಒಂದು ಕೆರೆ ಏರಿಯ ಮೇಲೆ ಅಪಘಾತಕ್ಕೀಡಾಗಿ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಮಸ್ಯೆ ಬಗ್ಗೆ ಹಲವು ಬಾರಿ ಶಾಸಕರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಕೂಡಲೇ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಕೆರೆ ಏರಿಯನ್ನು ದುರಸ್ತಿಪಡಿಸಬೇಕು, ಕೆರೆ ಏರಿಯ ಎರಡೂ ಬದಿಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಿ ರಸ್ತೆಯಲ್ಲಿ ವಾಹನಗಳು ಮತ್ತು ಸಾರ್ವಜನಿಕರು ಸುರಕ್ಷಿತವಾಗಿ ಓಡಾಡುವಂತಾಗಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net