

ಚಿಕ್ಕಮಗಳೂರು: ಮನುಷ್ಯ ತನ್ನೊಳಗಿನ ದುರಾಸೆ ಬಿಟ್ಟು ಪರೋಪಕಾರ, ಸತ್ಕಾರ್ಯಗಳ ಮೂಲಕ ಅಂತರಂಗದ ಶುದ್ಧ ಭಕ್ತಿ ಹೊಂದಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ಹಂಗರವಳ್ಳಿಯಲ್ಲಿ ಸೋಮವಾರ ಶ್ರೀ ಉದ್ದಂಡೇಶ್ವರ ಸ್ವಾಮಿ ದೇವಾಲಯದ ಮರು ಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ:
ನಮ್ಮದು ಸುಸಂಸ್ಕøತ ಸಮಾಜ. ಪೂರ್ವಜರ ಪರಂಪರೆಯಿಂದಲೂ ದೈವದ ಪರಿಕಲ್ಪನೆ ಇದೆ. ಇಂದ್ರೀಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಅರಳುವ ಮನಸ್ಸನ್ನು ಹೊಂದಬೇಕು. ಸಮುದಾಯದ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿ, ದೇಶ ಸೇವೆ ಮಾಡಲು ಪ್ರೇರೇಪಿಸಬೇಕು. ನಮ್ಮ ಸಂಸ್ಕøತಿಯನ್ನು ಜಗತ್ತಿನೆಲ್ಲೆಡೆ ತಿಳಿಸಬೇಕು. ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಆಗದಿದ್ದಲ್ಲಿ ಆ ಮಕ್ಕಳನ್ನು ಆದಿಚುಂಚನಗಿರಿ ಮಠಕ್ಕೆ ಸೇರಿಸಿದರೆ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸ ನೋಡಿಕೊಳ್ಳಲಾಗುವುದು ಎಂದರು. ಮನುಷ್ಯ ಜನ್ಮ ಎನ್ನುವುದು ಪವಿತ್ರವಾದುದು. ಶಿಕ್ಷಣದೊಂದಿಗೆ ಸಮಾಜಮುಖಿ ಕಾರ್ಯಗಳ ಮೂಲಕ ಉನ್ನತ ಸ್ಥಾನ ಪಡೆಯಬೇಕು. ಮಲೆನಾಡಿನ ಪ್ರಕೃತಿ ಕುವೆಂಪು ಅವರಂಥ ಅನೇಕ ಮಹನೀಯರಿಗೆ ಪೂಜನೀಯವಾಗಿ ಕಂಡಿತ್ತು.
ದೇಗುಲಗಳು ಭಕ್ತಿಯ ಕೇಂದ್ರಗಳಾಗಬೇಕು:
ಶಾಸಕ ಸಿ.ಟಿ.ರವಿ ಮಾತನಾಡಿ, ಸಮಾಜದಲ್ಲಿ ನಿರ್ಮಾಣವಾಗುವ ದೇಗುಲಗಳು ಜಾತಿ ಮುಕ್ತವಾಗಿ ಭಕ್ತಿಯ ಕೇಂದ್ರಗಳಾಗಬೇಕು. ಜಾತೀಯತೆಯಿಂದಾಗಿ ದೇಶ, ಸಮಾಜ, ದುರ್ಬಲವಾಗುತ್ತಿದೆ. ಮನುಷ್ಯನ ಜನ್ಮ ಸಾರ್ಥಕವಾಗುವುದು ಜಾತಿಯಿಂದಲ್ಲ, ಪರೋಪಕಾರ ಗುಣದಿಂದ. ಅಂತರಂಗದಲ್ಲಿ ಇಲ್ಲದ ಭಕ್ತಿ ನಿಜವಾದ ಭಕ್ತಿಯಲ್ಲ ಈ ಹಿಂದೆ ಪರೋಪಕಾರ, ಸದ್ಗುಣಗಳಿಂದ ಸೇವೆ ಮಾಡಿದವರನ್ನು ಇಂದು ದೇವರನ್ನಾಗಿ ಪೂಜಿಸಲಾಗುತ್ತಿದೆ ಎಂದರು. ಭಗವಂತ ಸರ್ವ ವ್ಯಾಪಿ. ದೇವಸ್ಥಾನ ನಿರ್ಮಿಸುವುದು ನಮ್ಮ ಸಂಸ್ಕøತಿ, ದೇವರನ್ನು ಸಾಕ್ಷಾತ್ಕರಿಸುವ ಮಾರ್ಗ. ಭಕ್ತಿ ಎಂಬುದು ವ್ಯಾಪಾರವಲ್ಲ, ಅಂತರಂಗದ ಶುದ್ಧಿ ಬೇಕು. ದೇವರುಗಳಿಗೆ ಜಾತಿ, ಮತಗಳಿಲ್ಲ ಎಂದ ಮೇಲೆ ಮನುಷ್ಯರಿಗೇಕೆ ಎಂದು ಪ್ರಶ್ನಿಸಿದರು.
ಮನುಷ್ಯನ ನಡವಳಿಕೆಯಿಂದ ಸಮಸ್ಯೆ:
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಸಮಾಜದಲ್ಲಿ ಮನುಷ್ಯನ ನಡವಳಿಕೆಗಳಿಂದ ಸಮಸ್ಯೆಗಳು ಉದ್ಭವವಾಗುತ್ತಿವೆ. ಮತ್ಸರ, ಅಪನಂಬಿಕೆ ಬಿಟ್ಟು ಪ್ರೀತಿ, ಸಹಬಾಳ್ವೆಯಿಂದ ಜೀವನ ಸಾಗಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶಾಸಕ ಎಂ.ಪಿ.ಕುಮಾರಸ್ವಾಮಿ, ದೇವಸ್ಥಾನದ ಅಧ್ಯಕ್ಷ ಗೋಪಾಲ ಗೌಡ, ಗ್ರಾಪಂ ಅಧ್ಯಕ್ಷೆ ಸ್ಮಿತಾ ನಾಗೇಶ್, ಉಪಾಧ್ಯಕ್ಷ ನಾಗೇಶ್, ಜಿಪಂ ಮಾಜಿ ಉಪಾಧ್ಯಕ್ಷೆ ಸವಿತಾ ರಮೇಶ್, ಡಾ.ಸಿ.ಕೆ.ಸುಬ್ಬರಾಯ, ಕಾಳಾಚಾರ್, ದಿಲೀಪ್, ಪ್ರಭಾಕರ್ ಇದ್ದರು.