

ಮೈಸೂರು: ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಸತೀಶ್ ದಾವಣಗೆರೆ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಆ.14ರಂದು ಸ್ವಾತಂತ್ರೃ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದು ಜಾಗರಣ ವೇದಿಕೆಯ ಪ್ರಾಂತ ಸಂಯೋಜಕ ಸತೀಶ್ ದಾವಣಗೆರೆ ಅವರು ದಿಕ್ಸೂಚಿ ಭಾಷಣ ಮಾಡಿ, ದೇಶ ವಿಭಜನೆಯ ಸತ್ಯ ಸಂಗತಿಯನ್ನು ತಿಳಿಸಿದ್ದರು. ಆದರೆ ಇದನ್ನೇ ಪ್ರಚೋದನಾಕಾರಿ ಭಾಷಣವೆಂದು ನೋಟಿಸ್ ಸಹ ನೀಡದೆ ಮಧ್ಯರಾತ್ರಿ ಮನೆಗೆ ನುಗ್ಗಿ ಬಂಧಿಸಿರುವುದು ಸರಿಯಲ್ಲ ಎಂದು ದೂರಿದರು.
ದೇಶದಲ್ಲಿ ನಡೆಯುತ್ತಿರುವ ಸತ್ಯ ಸಂಗತಿಗಳನ್ನು ಜನರ ಮುಂದಿಡುವ ಪ್ರಯತ್ನವನ್ನು ವೇದಿಕೆ ಮಾಡುತ್ತಿದೆ. ಆದರೆ ದಬ್ಬಾಳಿಕೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದು ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸತ್ಯ ಮಾತನಾಡುವ ಸಾಮಾಜಿಕ ಹಿಂದು ಕಾರ್ಯಕರ್ತರ ಮಾನಸಿಕ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನವನ್ನು ಸಮಾಜ ವಿರೋಧಿಗಳು, ದುಷ್ಟಶಕ್ತಿಗಳು ಮಾಡುತ್ತಿವೆ. ಇದು ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದ್ದು, ಮುಂದೆ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆ ಸಂಚಾಲಕ ಕೇಶವಮೂರ್ತಿ, ಸುಧೀರ್, ಸಂಜಯ್, ಕುಮಾರ್ ಇತರರು ಇದ್ದರು.